ಉದಯವಾಹಿನಿ,ಬೆಂಗಳೂರು: ಬಿಜೆಪಿಗೆ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾದ ಕ್ಷಣದಿಂದ ಕಾಂಗ್ರೆಸ್ ಸರ್ಕಾರದ ಪತನದ ಕ್ಷಣಗಳು ಆರಂಭವಾಗಲಿದೆ ಎಂಬ ವದಂತಿಗಳು ವ್ಯಾಪಕವಾಗಿವೆ. ಕಾಂಗ್ರೆಸ್‍ನಲ್ಲಿರುವ ಕೆಲವು ಅಸಮಧಾನಿತ ನಾಯಕರ ಜೊತೆ ಬಿಜೆಪಿಯ 2ನೇ ಹಂತದ ನಾಯಕರು ಮಾತುಕತೆ ನಡೆಸಿದ್ದು, ನಿಮ್ಮ ರಾಜಕೀಯ ನಿರ್ಧಾರಗಳು ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿವೆ ಎಂಬ ಸೂಚ್ಯವಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ.
ತಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿ ಎಂದು ಹೇಳುವ ಜೊತೆಗೆ ಕುಟುಂಬ ಸದಸ್ಯರ ಜೊತೆಯೂ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗಳಿಸಿದ್ದು, ಪಕ್ಷೇತರರು ಹಾಗೂ ಸರ್ವೋದಯ ಪಕ್ಷದ ಶಾಸಕರು ಸೇರಿದಂತೆ 138 ಸಂಖ್ಯಾಬಲವನ್ನು ಹೊಂದಿದೆ.
ಸದ್ಯಕ್ಕೆ ಸರ್ಕಾರವನ್ನು ಅಸ್ಥಿರಗೊಳಿಸುವುದು ಸುಲಭವಲ್ಲ ಎಂಬ ಚರ್ಚೆಗಳಿವೆ. ಆದರೆ ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ಶಾಸಕರ ಜೊತೆ ಅದರಲ್ಲೂ ಸಚಿವ ಸಂಪುಟದಲ್ಲಿ ಅವಕಾಶ ಸಿಗದೆ ಅಸಮಾಧಾನಗೊಂಡಿರುವವರೊಂದಿಗೆ ಪದೇ ಪದೇ ಚರ್ಚೆ ನಡೆಸುತ್ತಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ.
ರಾಜಕೀಯ ಪಕ್ಷದಲ್ಲಿ ಅತೃಪ್ತಿ, ಅಸಮಾಧಾನಗಳು ಸಹಜ. ಪ್ರತಿಯೊಬ್ಬರಿಗೂ ಉನ್ನತ ಸ್ಥಾನ ಗಳಿಸಬೇಕೆಂಬ ಆಕಾಂಕ್ಷೆ ಇರುತ್ತದೆ. ಅದಕ್ಕೆ ಅನುಗುಣವಾಗಿ ಅವಕಾಶಗಳು ಇರುವುದಿಲ್ಲ. ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಗುಂಪುಗಾರಿಕೆಯಿಂದಾಗಿ ಬಹಳಷ್ಟು ಮಂದಿ ಮೂಲೆ ಗುಂಪಾಗಿದ್ದಾರೆ. ಆದರೂ ಪಕ್ಷದ ಮುಂದಿನ ದಿನಗಳಲ್ಲಿ ಭವಿಷ್ಯ ಸಿಗಬಹುದೆಂಬ ನಿರೀಕ್ಷೆಯಲ್ಲಿ ಕಾಲದೂಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!