ಉಯವಾಹಿನಿ, ವಿಜ್ಞಾನವು ಮನುಷ್ಯನ ಜೀವನವನ್ನು ಸಾಕಷ್ಟು ಸುಲಭಗೊಳಿಸಿದೆ. ಆದರೆ ಕಾಲ ಪ್ರಯಾಣ ಇನ್ನೂ ಮಾನವನ ಕೈಗೆ ಸಿಕ್ಕಿಲ್ಲ. ಭೂತಕಾಲ ಅಥವಾ ಭವಿಷ್ಯಕ್ಕೆ ನಿಜವಾಗಿಯೂ ಹೋಗಲು ಸಾಧ್ಯವಿಲ್ಲ. ಆದರೂ, ಜಗತ್ತಿನಲ್ಲಿ ಒಂದು ವಿಚಿತ್ರ ಸ್ಥಳವಿದೆ, ಅಲ್ಲಿ ನಿಂತರೆ ನಿಮ್ಮ ಮುಂದೆ ಇರುವ ದ್ವೀಪವೇ “ಭವಿಷ್ಯ”ವನ್ನು ಪ್ರತಿನಿಧಿಸುತ್ತದೆ. ಈ ನಿಗೂಢ ಸ್ಥಳವೇ ಡಿಯೋಮೆಡ್ ದ್ವೀಪ.
ಡಿಯೋಮೆಡ್ ದ್ವೀಪವು ವಾಸ್ತವವಾಗಿ ಎರಡು ದ್ವೀಪಗಳಾಗಿವೆ. ಅವು ಬಿಗ್ ಡಿಯೋಮೆಡ್ ಮತ್ತು ಲಿಟಲ್ ಡಿಯೋಮೆಡ್. ಈ ಎರಡು ದ್ವೀಪಗಳ ನಡುವಿನ ಅಂತರ ಕೇವಲ 4.8 ಕಿಲೋಮೀಟರ್ ಮಾತ್ರ. ಅಷ್ಟೇ ದೂರದಲ್ಲಿದ್ದರೂ, ಈ ದ್ವೀಪಗಳ ನಡುವೆ ಇರುವ ಸಮಯದ ವ್ಯತ್ಯಾಸವು ಒಂದು ದಿನವಾಗಿದೆ ಎಂಬುದೇ ಇಲ್ಲಿನ ಅಚ್ಚರಿ. ಈ ವಿಚಿತ್ರತೆಗೆ ಕಾರಣ ಅಂತರರಾಷ್ಟ್ರೀಯ ದಿನಾಂಕ ರೇಖೆ. ಈ ಕಾಲ್ಪನಿಕ ರೇಖೆಯು ಬಿಗ್ ಡಿಯೋಮೆಡ್ ಮತ್ತು ಲಿಟಲ್ ಡಿಯೋಮೆಡ್ ನಡುವೆಯೇ ಹಾದುಹೋಗುತ್ತದೆ. ಈ ರೇಖೆಯನ್ನು ದಾಟಿದ ಕ್ಷಣಕ್ಕೆ ದಿನಾಂಕವೇ ಬದಲಾಗುತ್ತದೆ. ಉದಾಹರಣೆಗೆ, ಲಿಟಲ್ ಡಿಯೋಮೆಡ್‌ನಲ್ಲಿ ಭಾನುವಾರ ಇದ್ದರೆ, ಬಿಗ್ ಡಿಯೋಮೆಡ್‌ನಲ್ಲಿ ಅದೇ ಸಮಯದಲ್ಲಿ ಸೋಮವಾರ ಇರುತ್ತದೆ.
ಈ ಕಾರಣಕ್ಕಾಗಿಯೇ ಲಿಟಲ್ ಡಿಯೋಮೆಡ್ ಅನ್ನು “ನಿನ್ನೆ ದ್ವೀಪ” ಎಂದು ಕರೆಯಲಾಗುತ್ತದೆ. ಅದೇ ರೀತಿ ಬಿಗ್ ಡಿಯೋಮೆಡ್‌ಗೆ “ಟುಮಾರೋ ಐಲ್ಯಾಂಡ್” ಎಂಬ ಹೆಸರು ಬಂದಿದೆ. ಅಂದರೆ, ನೀವು ನಿಂತ ಸ್ಥಳದಿಂದಲೇ ಮುಂದಿನ ದಿನವನ್ನು ನೋಡಬಹುದಾದ ಅಪರೂಪದ ಜಾಗ ಇದಾಗಿದೆ. ಈ ದ್ವೀಪವನ್ನು 1728ರ ಆಗಸ್ಟ್ 16ರಂದು ಡ್ಯಾನಿಶ್-ರಷ್ಯನ್ ನಾವಿಕ ವಿಟಸ್ ಬೆರಿಂಗ್ ಕಂಡುಹಿಡಿದರು. ನಂತರದ ವರ್ಷಗಳಲ್ಲಿ ಈ ಪ್ರದೇಶವು ರಷ್ಯಾ ಮತ್ತು ಅಮೆರಿಕ ನಡುವಿನ ಗಡಿಯ ಭಾಗವಾಯಿತು. 1982ರಲ್ಲಿ ಗಡಿ ಒಪ್ಪಂದಗಳ ನಂತರ ಈ ಪ್ರದೇಶದ ಮಹತ್ವ ಇನ್ನಷ್ಟು ಹೆಚ್ಚಾಯಿತು. ಆದರೆ ಪ್ರಸ್ತುತ ರಷ್ಯಾ ಮತ್ತು ಅಮೆರಿಕ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಈ ದ್ವೀಪಗಳಿಗೆ ಸಾರ್ವಜನಿಕರಿಗೆ ಭೇಟಿ ನೀಡಲು ಅನುಮತಿ ಇಲ್ಲ. ಹೀಗಾಗಿ ಭವಿಷ್ಯವನ್ನು ಕಣ್ಣಾರೆ ನೋಡುವ ಅವಕಾಶ ಇದ್ದರೂ, ಅದು ಈಗಲೂ ರಹಸ್ಯವಾಗಿಯೇ ಉಳಿದಿದೆ.
