ಉದಯವಾಹಿನಿ, ಬೆಂಗಳೂರು: ಅಡುಗೆ ಅನಿಲ ಹಾಗೂ ವಿದ್ಯುತ್ ದರ ಏರಿಕೆಯ ಬೆನ್ನಲ್ಲೆ ಊಟ-ತಿಂಡಿ ಕಾ
ಫಿ-ಟೀ ಬೆಲೆಯನ್ನು ಶೇ.10ರಷ್ಟು ಹೆಚ್ಚಿಸಲು ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ. ಹೋಟೆಲ್ ಮಾಲೀಕರ ಸಂಘ ಇತ್ತೀಚೆಗೆ ಸಭೆ ನಡೆಸಿದ್ದು, ಪ್ರಸ್ತುತ ಸಂದರ್ಭದಲ್ಲಿ ದರ ಏರಿಕೆ ಅನಿವಾರ್ಯ ಇಲ್ಲವಾದರೆ ನಷ್ಟದಿಂದ ಉದ್ಯಮವನ್ನೇ ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.ಹೀಗಾಗಿ ಆಗಸ್ಟ್ 1ರಿಂದ ಅನ್ವಯವಾಗುವಂತೆ ಶೇ.10ರಷ್ಟು ಹೆಚ್ಚಿಸಲು ಚಿಂತನೆ ನಡೆದಿದೆ. ಅಕ್ಕಿ, ಧವಸಧಾನ್ಯ, ಹಣ್ಣು, ತರಕಾರಿ, ಹಾಲು, ವಿದ್ಯುತ್ ದುಬಾರಿಯಾಗಿವೆ. ಟೊಮೊಟೊ ಬೆಲೆ ಏರಿಕೆಯಿಂದ ಕಳೆದ ಒಂದು ತಿಂಗಳಿನಿಂದಲೂ ಹೋಟೆಲ್ ಮಾಲೀಕರಿಗೆ ಭಾರೀ ನಷ್ಟವಾಗಿದೆ. ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಆದರೆ ಮುಂದೆ ಇದೇ ಪರಿಸ್ಥಿತಿ ಅನುಭವಿಸಲು ಸಾಧ್ಯವಿಲ್ಲ ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.ಸಿಬ್ಬಂದಿ ವೇತನ, ತೆರಿಗೆ ಪಾವತಿಗೂ ಪರದಾಡುವ ಪರಿಸ್ಥಿತಿ ಇದೆ. ಸರ್ಕಾರಕ್ಕೆ ನಮ್ಮಿಂದ ತೆರಿಗೆ ಹೋಗುತ್ತಿದೆ. ಆದರೆ ಸರ್ಕಾರದಿಂದ ನಮಗೆ ಯಾವುದೇ ರೀತಿಯ ನೆರವುಗಳಿಲ್ಲ, ಸಬ್ಸಿಡಿಗಳಿಲ್ಲ. ಪ್ರತಿ ವಿಷಯದಲ್ಲೂ ಕಿರುಕುಳವಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
