ಉದಯವಾಹಿನಿ, ತಿರುವನಂತಪುರಂ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಬಳಿಕ ಗರ್ಭಪಾತಕ್ಕೆ ಒತ್ತಾಯಿಸಿರುವ ಆರೋಪದ ಮೇಲೆ ಕೇರಳದ ಕಾಂಗ್ರೆಸ್ ಉಚ್ಚಾಟಿತ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಬಂಧಿಸಲಾಗಿದೆ.
ಪತ್ತನಂತಿಟ್ಟ ಜಿಲ್ಲೆಯ ಮಹಿಳೆಯೊಬ್ಬರು ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರು ದಾಖಲಿಸಿದ್ದು, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಕೊಳ್ಳಲು ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಶಾಸಕ ರಾಹುಲ್ ವಿರುದ್ಧ ದಾಖಲಾಗುತ್ತಿರುವ ಮೂರನೇ ಅತ್ಯಾಚಾರ ಪ್ರಕರಣ ಇದಾಗಿದೆ.
ಮಹಿಳೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದು, ಪೊಲೀಸರು ಸ್ವೀಕರಿಸಿದ್ದಾರೆ. ಬಳಿಕ ಪಾಲಕ್ಕಾಡ್‌ನ ಹೋಟೆಲ್‌ನಲ್ಲಿ ತಂಗಿದ್ದ ಶಾಸಕ ರಾಹುಲ್ ಅವರನ್ನು ವಶಕ್ಕೆ ಪಡೆದು, ಬಂಧಿಸಿದ್ದಾರೆ. ಈ ಸಂಬಂಧ ಪತ್ತನಂತಿಟ್ಟ ಜಿಲ್ಲೆಯಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಶಾಸಕರ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಮೊದಲನೇ ಪ್ರಕರಣದಲ್ಲಿ, ದಾಂಪತ್ಯ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಮಹಿಳೆಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕಿಸಿ, ಬಳಿಕ ಮದುವೆಯಾಗಿ ನಂಬಿಸಿದ್ದರು. ಗರ್ಭಿಣಿಯಾದರೆ ಸುಲಭವಾಗಿ ಮದುವೆಯಾಗಬಹುದು ಎಂದು ತಿಳಿಸಿ, ಲೈಂಗಿಕ ಸಂಪರ್ಕವನ್ನು ಬೆಳೆಸಿದ್ದರು. ಗರ್ಭಿಣಿಯಾದ ನಂತರ ಗರ್ಭಪಾತಕ್ಕೆ ಒತ್ತಾಯಿಸಿದ್ದಲ್ಲದೇ, ಇದು ನನ್ನ ಮಗುವಲ್ಲ ಎಂದಿದ್ದ. ಇದರಿಂದ ಮಾನಸಿಕ ಕಿರುಕುಳ ಉಂಟಾಗಿ, ಗರ್ಭಪಾತವಾಯಿತು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಶಾಸಕ ರಾಹುಲ್‌ಗೆ ಮಧ್ಯಂತರ ಜಾಮೀನು ನೀಡಿದೆ.
