ಉದಯವಾಹಿನಿ, ನವದೆಹಲಿ: 2023ರಲ್ಲಿ ಪತಿಯ ಕೊಲೆಗೆ ಸಾಕ್ಷಿಯಾಗಿದ್ದ 44 ವರ್ಷದ ದೆಹಲಿ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವಾಯುವ್ಯ ದೆಹಲಿಯ ಶಾಲಿಮಾರ್ ಬಾಗ್‌ನಲ್ಲಿ ನಡೆದಿದೆ. ಮಹಿಳೆಯನ್ನು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 2023ರಲ್ಲಿ ನಡೆದಿದ್ದ ತನ್ನ ಪತಿಯ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು ಮಹಿಳೆ. ಈ ಹಿನ್ನೆಲೆಯಲ್ಲಿ ಆಕೆಯನ್ನೂ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶಾಲಿಮಾರ್ ಬಾಗ್ ನಿವಾಸಿ ಮತ್ತು ಅವರ ಪ್ರದೇಶದ ನಿವಾಸಿ ಕಲ್ಯಾಣ ಸಂಘದ (ಆರ್‌ಡಬ್ಲ್ಯೂಎ) ಅಧ್ಯಕ್ಷೆ ರಚನಾ ಯಾದವ್ ಕೊಲೆಯಾದ ಮಹಿಳೆ. ಈಕೆಯ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ರಚನಾ ಮೂಲತಃ ವಾಯುವ್ಯ ದೆಹಲಿಯ ಭಲ್ಸ್ವಾ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.
2023ರ ಪ್ರಕರಣದಲ್ಲಿ, ವಿಜೇಂದ್ರ ಯಾದವ್ ಅವರನ್ನು ದ್ವೇಷದ ಕಾರಣ ಕೊಲೆ ಮಾಡಲಾಗಿತ್ತು. ಭರತ್ ಯಾದವ್ ಮತ್ತು ಇತರ ಐವರು ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು. ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಭರತ್ ಯಾದವ್ ತಲೆಮರೆಸಿಕೊಂಡಿದ್ದಾನೆ.
