ಉದಯವಾಹಿನಿ, ಕೋಲ್ಕತ್ತ: ಐ–ಪ್ಯಾಕ್ ಕಲ್ಲಿದ್ದಲು ಹಗರಣ ಪ್ರಕರಣದ ತನಿಖೆಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ, ಜಾರಿ ನಿರ್ದೇಶನಾಲಯ (ಇಡಿ) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಕೇಂದ್ರ ತನಿಖಾ ದಳ (ಸಿಬಿಐ) ಘಟನೆಯ ಕುರಿತು ತನಿಖೆ ನಡೆಸುವಂತೆ ಇಡಿಗೆ ಮನವಿ ಮಾಡಿದ್ದು, “ನ್ಯಾಯಸಮ್ಮತ ಮತ್ತು ಸ್ವತಂತ್ರ ತನಿಖೆ ನಡೆಸುವ ನಮ್ಮ ಹಕ್ಕನ್ನು ರಾಜ್ಯ ಸರ್ಕಾರ ಕಸಿದುಕೊಂಡಿದೆ” ಎಂದು ಇಡಿ ಮನವಿಯಲ್ಲಿ ಹೇಳಿದೆ.
ಐ–ಪ್ಯಾಕ್ ರಾಜಕೀಯ ಸಲಹಾ ಸಂಸ್ಥೆಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಸಂಭವಿಸಿದ ಘಟನೆಗಳ ಬಗ್ಗೆ ಇಡಿ ತನ್ನ ಅರ್ಜಿಯಲ್ಲಿ ವಿವರಿಸಿದೆ. ಅಲ್ಲದೇ ಐ–ಪ್ಯಾಕ್ ಸಂಸ್ಥೆಯು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರ ರೂಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ ಎಂದು ಇಡಿ ಹೇಳಿದೆ.ಹಣಕಾಸು ತನಿಖಾ ಸಂಸ್ಥೆಯ ಪ್ರಕಾರ, ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲು ಮತ್ತು ಕಾನೂನುಬದ್ಧ ತನಿಖೆ ನಡೆಸಲು ಅಧಿಕಾರಿಗಳಿಗೆ ಅಡ್ಡಿಪಡಿಸಲಾಗಿದೆ. ಹಿರಿಯ ರಾಜ್ಯಾಧಿಕಾರಿಗಳ ಸಮ್ಮುಖದಲ್ಲೇ ಭೌತಿಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಬಲವಂತವಾಗಿ ಸ್ಥಳದಿಂದ ತೆಗೆದುಹಾಕಲಾಗಿದೆ ಎಂದು ಇಡಿ ಆರೋಪಿಸಿದೆ.
ಇಡಿ ಸುಪ್ರೀಂ ಕೋರ್ಟ್‌ಗೆ ತೆರಳುವ ಮುನ್ನವೇ, ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ. ಕೇವಿಯಟ್ ಎಂದರೆ, ಸಂಬಂಧಿತ ಪಕ್ಷವನ್ನು ಕೇಳದೆ ಯಾವುದೇ ಆದೇಶ ಹೊರಡಿಸಬಾರದು ಎಂಬ ಅಧಿಕೃತ ಮನವಿ ಮಾಡಿದೆ. ಇಡಿಗೆ ಯಾವುದೇ ಮಧ್ಯಂತರ ಪರಿಹಾರ ನೀಡುವ ಮೊದಲು ರಾಜ್ಯ ಸರ್ಕಾರದ ವಾದವನ್ನೂ ಕೋರ್ಟ್ ಮುಂದೆ ಇಡಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.ಸುಮಾರು ₹10 ಕೋಟಿ ಮೌಲ್ಯದ ಅಪರಾಧದ ಆದಾಯವನ್ನು ಹವಾಲಾ ಮಾರ್ಗಗಳ ಮೂಲಕ ಐ–ಪ್ಯಾಕ್‌ಗೆ ವರ್ಗಾಯಿಸಲಾಗಿದೆ ಮತ್ತು 2022ರ ಗೋವಾ ವಿಧಾನಸಭಾ ಚುನಾವಣೆ ವೇಳೆ ನೀಡಿದ ಸೇವೆಗಳಿಗಾಗಿ ತೃಣಮೂಲ ಕಾಂಗ್ರೆಸ್ ಐ–ಪ್ಯಾಕ್‌ಗೆ ಪಾವತಿ ಮಾಡಿದೆ ಎಂದು ಇಡಿ ಆರೋಪಿಸಿದೆ.
