ಉದಯವಾಹಿನಿ, ಭುವನೇಶ್ವರ : 7 ಮಂದಿಯನ್ನು ಹೊತ್ತೊಯ್ಯುತ್ತಿದ್ದ 9 ಸೀಟರ್‌ನ ಲಘು ವಿಮಾನವೊಂದು ಶನಿವಾರ (ಜನವರಿ 10) ಒಡಿಶಾದಲ್ಲಿ ಪತನವಾಗಿದೆ. ಅದೃಷ್ಟವಶಾತ್‌ ಯಾವುದೇ ಜೀವ ಹಾನಿ ಸಂಭವಿಸಿಲ್ಲ  ವಿಮಾನದಲ್ಲಿ 6 ಪ್ರಯಾಣಿಕರು, ಓರ್ವ ಪೈಲಟ್‌ ಸೇರಿ ಒಟ್ಟು 7 ಮಂದಿ ಇದ್ದರು. ಇವರೆಲ್ಲ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇಂಡಿಯಾಒನ್‌ ಫ್ಲೈಟ್‌ಗೆ ಸೇರಿದ ಈ ಲಘು ವಿಮಾನ ರೂರ್ಕೆಲಾದಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ರೂರ್ಕೆಲಾದಿಂದ ಸುಮಾರು 10–15 ಕಿಲೋ ಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದೆ ಎಂದು ವರದಿಯಾಗಿದೆ.

ಒಡಿಶಾದ ವಾಣಿಜ್ಯ ಮತ್ತು ಸಾರಿಗೆ ಸಚಿವ ಬಿ.ಬಿ. ಜೆನಾ ಈ ಬಗ್ಗೆ ಮಾಹಿತಿ ನೀಡಿ, “ರೂರ್ಕೆಲಾದಿಂದ ಭುವನೇಶ್ವರಕ್ಕೆ 6 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ 9 ಸೀಟ್‌ಗಳ ಎ-1 ಖಾಸಗಿ ವಿಮಾನ ಅಪಘಾತಕ್ಕೀಡಾಗಿದೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ರೂರ್ಕೆಲಾದಿಂದ 10 ಕಿಲೋ ಮೀಟರ್ ದೂರದಲ್ಲಿರುವ ಜಲ್ಡಾದ, ಜನ ವಸತಿ ಪ್ರದೇಶದಿಂದ ದೂರದಲ್ಲಿ ವಿಮಾನ ಪತನವಾಗಿದ್ದರಿಂದ ಬಹುದೊಡ್ಡ ಅನಾಹುತ ತಪ್ಪಿದೆʼʼ ಎಂದು ಹೇಳಿದ್ದಾರೆ.

ಮೇಲ್ನೋಟಕ್ಕೆ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷವೇ ಪತನಕ್ಕೆ ಕಾರಣ ಎನ್ನಲಾಗಿದೆ. ರೂರ್ಕೆಲಾದಿಂದ ಟೇಕ್‌ಆಫ್‌ ಆದ ಕೆಲವೇ ಹೊತ್ತಿನಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು ಎನ್ನಲಾಗಿದೆ. ಕೂಎಲೇ ಎಚ್ಚೆತ್ತ ಪೈಲಟ್‌ ವಿಮಾನವನ್ನು ಜನವಸತಿ ಇಲ್ಲದ ಬಯಲು ಪ್ರದೇಶದಲ್ಲಿ ಇಳಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸುದ್ದಿ ತಿಳಿಯುತ್ತಿದ್ಧಂತೆ ರಕ್ಷಣಾ ತಂಡಗಳು ಆಗಮಿಸಿ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಈ ವಿಮಾನ ರೂರ್ಕೆಲಾ-ಭುವನೇಶ್ವರ ಮಧ್ಯೆ ನಿಯಮಿತವಾಗಿ ಸಂಚರಿಸುತ್ತದೆ.

Leave a Reply

Your email address will not be published. Required fields are marked *

error: Content is protected !!