ಉದಯವಾಹಿನಿ, ನವದೆಹಲಿ: ನಿತ್ಯದ ಕೆಲಸದ ಸಮಯದಲ್ಲಿ ತಾವು ಮೊಬೈಲ್ ಫೋನ್ ಬಳಸುವುದಿಲ್ಲ, ಇಂಟರ್ ನೆಟ್ ಕೂಡ ಉಪಯೋಗಿಸುವುದಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತಿಳಿಸಿದರು. ವಿಕಸಿತ ಭಾರತ ಯುವ ನಾಯಕರ ಸಂವಾದ 2026ರ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಅವರಿಗೆ ನೀವು ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಬಳಸುವುದಿಲ್ಲವಂತೆ ನಿಜವೇ ಎಂದು ಕೇಳಲಾಯಿತು. ಇದಕ್ಕೆ ಅವರು ತಾವು ಫೋನ್ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಫೋನ್ ಅವಶ್ಯಕ. ಆದರೆ ನಾನು ಅದನ್ನು ಬಳಸದೆ ನನ್ನ ಕೆಲಸವನ್ನು ನಿರ್ವಹಿಸುತ್ತೇನೆ. ಸಂವಹನಕ್ಕೆ ಇತರ ಹಲವು ಮಾರ್ಗಗಳಿವೆ. ಜನರಿಗೆ ತಿಳಿದಿಲ್ಲದ ಕೆಲವು ಹೆಚ್ಚುವರಿ ವಿಧಾನಗಳನ್ನು ನಾವು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು. ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯನ್ನು ಅಲಂಕರಿಸಿದ ಐದನೇ ವ್ಯಕ್ತಿಯಾಗಿರುವ ಅಜಿತ್ ದೋವೆಲ್, ಕೇರಳ ಕೇಡರ್‌ನ ನಿವೃತ್ತ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿದ್ದಾರೆ.
ಅವರು ಗುಪ್ತಚರ, ಆಂತರಿಕ ಭದ್ರತೆ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಹಲವು ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಉತ್ತರಾಖಂಡದಲ್ಲಿ 1945 ರಲ್ಲಿ ಜನಿಸಿದ ಅಜಿತ್ ದೋವಲ್ 1968ರಲ್ಲಿ ಐಪಿಎಸ್ ಸೇರಿದ್ದು, ಶೌರ್ಯಕ್ಕಾಗಿ ಕೀರ್ತಿ ಚಕ್ರ ಪಡೆದ ಅತ್ಯಂತ ಕಿರಿಯ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
2016ರ ಸರ್ಜಿಕಲ್ ಸ್ಟ್ರೈಕ್, 2019ರ ಬಾಲಕೋಟ್ ವೈಮಾನಿಕ ದಾಳಿಗಳ ನಿರ್ಧಾರ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದ ದೋವಲ್, 1999ರಲ್ಲಿ ನಡೆದ ಕಂದಹಾರ್‌ನಲ್ಲಿ ಐಸಿ-814 ವಿಮಾನ ಅಪಹರಣ ಸಂದರ್ಭದಲ್ಲಿ ಪ್ರಮುಖ ಸಂಧಾನಕಾರರಲ್ಲಿ ಒಬ್ಬರಾಗಿದ್ದರು. ಪಾಕಿಸ್ತಾನದಲ್ಲಿ ಹಲವಾರು ವರ್ಷಗಳ ಕಾಲ ರಹಸ್ಯವಾಗಿ ಕೆಲಸ ಮಾಡಿದ್ದರು.
