ಉದಯವಾಹಿನಿ, ಭೋಪಾಲ್: ವೈದ್ಯಕೀಯ ಬೇಜವಾಬ್ದಾರಿಯ ಪ್ರಕರಣವೊಂದು ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಬೆಳಕಿಗೆ ಬಂದಿದೆ. ದಾದಿಯೊಬ್ಬಳ ನಿರ್ಲಕ್ಷ್ಯದಿಂದ ಆಸ್ಪತ್ರೆಯಲ್ಲಿ ದಾಖಲಾದ ಒಂದೂವರೆ ತಿಂಗಳ ಶಿಶುವಿಗೆ ಗಂಭೀರ ಗಾಯವಾಗಿದೆ. ನರ್ಸ್ ಇಂಟ್ರಾವೆನಸ್ ಕ್ಯಾತಿಟರ್ ತೆಗೆಯುವಾಗ ಆಕಸ್ಮಿಕವಾಗಿ ಮಗುವಿನ ಹೆಬ್ಬೆರಳು ಕತ್ತರಿಸಿದ್ದಾಳೆ. ಸದ್ಯ ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಮಹಾರಾಜ ಯಶ್ವಂತರಾವ್ ಆಸ್ಪತ್ರೆಯ ನ್ಯೂ ಚೆಸ್ಟ್ ವಾರ್ಡ್‌ನಲ್ಲಿ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಟ್ಮಾ ನಿವಾಸಿ ಅಂಜುಬಾಯಿ ಎಂಬುವವರ ಮಗುವಿಗೆ ಡಿಸೆಂಬರ್ 24ರಂದು ನ್ಯುಮೋನಿಯಾ ಬಾಧಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಕೈಯಲ್ಲಿ ಊತ ಕಂಡುಬಂದ ಹಿನ್ನೆಲೆಯಲ್ಲಿ ನರ್ಸಿಂಗ್ ಅಧಿಕಾರಿಯನ್ನು ಕರೆಯಲಾಯಿತು. ಕತ್ತರಿಗಳಿಂದ ಇಂಟ್ರಾವೆನಸ್ ಕ್ಯಾತಿಟರ್‌ನ ಟೇಪ್ ಅನ್ನು ಕತ್ತರಿಸುವಾಗ, ನರ್ಸ್ ಆಕಸ್ಮಿಕವಾಗಿ ಶಿಶುವಿನ ಹೆಬ್ಬೆರಳನ್ನು ಕತ್ತರಿಸಿದ್ದಾಳೆ ಎಂದು ಅಂಜುಬಾಯಿ ಹೇಳಿದ್ದಾರೆ. ಈ ಗಾಯವು ಕುಟುಂಬ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯಲ್ಲಿ ಭಯವನ್ನು ಉಂಟುಮಾಡಿತು. ಶಿಶುವನ್ನು ತಕ್ಷಣ ಇಂದೋರ್‌ನ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಪ್ಲಾಸ್ಟಿಕ್ ಸರ್ಜನ್‌ಗಳ ತಂಡವು ಕತ್ತರಿಸಿದ ಹೆಬ್ಬೆರಳನ್ನು ಮತ್ತೆ ಜೋಡಿಸಲು ತುರ್ತು ಶಸ್ತ್ರಚಿಕಿತ್ಸೆ ನಡೆಸಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮಗುವಿನ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಶಿಶು ಇನ್ನೂ ನಿಗಾದಲ್ಲಿದೆ.
ಘಟನೆಯ ನಂತರ, ಮಹಾರಾಜ ಯಶ್ವಂತರಾವ್ ಆಸ್ಪತ್ರೆಯ ಡಾ. ಅರವಿಂದ್ ಘಂಘೋರಿಯಾ ನರ್ಸ್ ಆರತಿ ಶ್ರೋತ್ರಿಯನನ್ನು ಅಮಾನತುಗೊಳಿಸಿದ್ದಾರೆ ಮತ್ತು ಮೂವರು ನರ್ಸಿಂಗ್ ಇನ್-ಚಾರ್ಜ್‌ಗಳ ಒಂದು ತಿಂಗಳ ವೇತನವನ್ನು ತಡೆಹಿಡಿದಿದ್ದಾರೆ. ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯಲ್ಲಿ ನ್ಯೂ ಚೆಸ್ಟ್ ವಾರ್ಡ್‌ನ ಉಸ್ತುವಾರಿ ಡಾ. ನಿರ್ಭಯ್ ಮೆಹ್ತಾ, ಉಪ ಸೂಪರಿಂಟೆಂಡೆಂಟ್ ಡಾ. ರೋಹಿತ್ ಬಡೇರಿಯಾ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ದಯಾವತಿ ದಯಾಳ್ ಇದ್ದಾರೆ. ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಸಮಿತಿಯು ಶೀಘ್ರದಲ್ಲೇ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.
