ಉದಯವಾಹಿನಿ, ಬೆಂಗಳೂರು: ಖಾಸಗಿ ಕಾರ್ಯಕ್ರಮಕ್ಕಾಗಿ ಜರ್ಮನ್ ಚಾನ್ಸಲರ್ ಬೆಂಗಳೂರು ಭೇಟಿ, ಪ್ರೋಟೋಕಾಲ್ ಲೋಪ ಆಗಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ಕೊಟ್ಟಿದ್ದಾರೆ.ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಜರ್ಮನಿ ಚಾನ್ಸಲರ್ ಟೂರ್ ಕಾರ್ಯಕ್ರಮ ಮೊದಲೇ ಫಿಕ್ಸ್ ಆಗಿತ್ತು. ಅವರದ್ದು ರಾಜ್ಯ ಸರ್ಕಾರದ ಜೊತೆಗೆ ಯಾವುದೇ ಕಾರ್ಯಕ್ರಮ ಇರಲಿಲ್ಲ. ನಾನು ಸರ್ಕಾರದ, ಸಿಎಂ ಪ್ರತಿನಿಧಿಯಾಗಿ, ಅವರ ಪರವಾಗಿಯೇ ಹೋಗಿ ಸ್ವಾಗತ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಬಾಷ್ ಕಂಪನಿ ಜೊತೆಗೆ ಚರ್ಚೆ ಮಾಡುವುದಕ್ಕೆ ಬಂದಿದ್ದರು. ಅವರು ನೇರವಾಗಿ ಬಾಷ್‌ಗೆ ಬಂದು ಅಲ್ಲಿಂದ ಹೋಗಿದ್ದರು. ಇದೆಲ್ಲವೂ ಮೊದಲೇ ಫಿಕ್ಸ್ ಆಗಿತ್ತು. ಅವರು ಕೇವಲ ಜರ್ಮನ್ ಮೀಡಿಯಾಗೆ ಮಾತ್ರ ಮಾಹಿತಿ ನೀಡಿದ್ದರು. ಸಿಎಂ ರಿಸೀವ್ ಮಾಡುವುದಕ್ಕೆ ಮಾತ್ರ ಬರಬಹುದಿತ್ತು. ವಿರೋಧ ಪಕ್ಷದವರು ಹೇಳಿದಷ್ಟು ಗಂಭೀರ ಲೋಪ ಆಗಿಲ್ಲ. ಕೇಂದ್ರದವರು ಮೊದಲೇ ನಿಗದಿಯಾಗಿದ್ದ ಮಾಹಿತಿಯನ್ನು ಮಾತ್ರ ಕಳಿಸಿದ್ದರು. ಅವರ ಖಾಸಗಿ ಕಾರ್ಯಕ್ರಮ ಅಲ್ಲದಿದ್ದರೆ ಖಂಡಿತವಾಗಿ ಸ್ವಾಗತಕ್ಕೆ ಸಿಎಂ ಬರುತ್ತಿದ್ದರು ಎಂದು ಹೇಳಿದ್ದಾರೆ.
