ಉದಯವಾಹಿನಿ , ನೆಲಮಂಗಲ: ಮಕರ ಸಂಕ್ರಾಂತಿ ದಿನದಂದು ನೆಲಮಂಗಲದ ಪ್ರಸಿದ್ಧ ಶಿವಗಂಗೆ ಬೆಟ್ಟದ ತುತ್ತತುದಿಯಲ್ಲಿ ಗಂಗಾ ತೀರ್ಥ ಉದ್ಭವವಾಗಿ ಜನರು ಪುನೀತರಾಗಿದ್ದಾರೆ. ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ತುದಿಯ ಕಂಬದ ಕೆಳಗೆ ಇಂದು ಮಧ್ಯಾಹ್ನದ ವೇಳೆ ಮಕರ ಲಗ್ನದಲ್ಲಿ ಗಂಗಾ ತೀರ್ಥ ಉದ್ಭವವಾಗಿದೆ. ಭೂಮಿಯಿಂದ ಸುಮಾರು 4,559 ಅಡಿ ಎತ್ತರವಿರುವ ಶಿವಗಂಗೆ ಬೆಟ್ಟದಲ್ಲಿ ವಿಸ್ಮಯ ರೀತಿಯಲ್ಲಿ ಪ್ರತಿ ವರ್ಷವೂ ನಡೆಯುವ ಕೌತುಕ ಇದಾಗಿದೆ. ಇಲ್ಲಿ ನೆಲೆಸಿರುವ ಶ್ರೀ ಗಂಗಾಧರೇಶ್ವರ ಮತ್ತು ಶ್ರೀ ಗಿರಿಜೆಗೆ ಕಲ್ಯಾಣೋತ್ಸವ ನೆರವೇರಿತು.
ನಂತರ ಶ್ರೀ ಗಂಗಾಧರೇಶ್ವರನಿಗೆ ವಿಶೇಷ ಪೂಜೆ ಮಾಡಲಾಯಿತು. ಬಳಿಕ ಬೆಟ್ಟ ತುದಿಯಲ್ಲಿ ಉದ್ಭವವಾದ ತೀರ್ಥ ನೀರನ್ನ ತಂದು ಗಿರಿಜಾ ಕಲ್ಯಾಣೋತ್ಸವ ಚಾಲನೆ ನೀಡಲಾಯಿತು. ನೆಲಮಂಗಲ ಶಾಸಕ ಶ್ರೀನಿವಾಸ್ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಿರಿಜಾ ಕಲ್ಯಾಣೋತ್ಸವ ಚಾಲನೆ ನೀಡಿ, ದೇವರ ದರ್ಶನ ಪಡೆದಿದ್ದಾರೆ.
