ಉದಯವಾಹಿನಿ , ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ‘ರಿಟೈರ್ಡ್ ಔಟ್’ ತಂತ್ರಗಾರಿಕೆಯನ್ನು ಪರಿಚಯಿಸಲಾಗಿತ್ತು. ಈ ನಿಯಮ ಪ್ರಸ್ತುತ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿಯೂ ಚಾಲ್ತಿಯಲ್ಲಿದೆ. ಇದೀಗ ಈ ನಿಯಮಕ್ಕೆ ಹಲವು ಮಾಜಿ ಕ್ರಿಕೆಟಿಗರು ಮತ್ತು ನೆಟ್ಟಿಗರು ತೀವ್ರ ಟೀಕೆ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಇದು ತಂತ್ರಗಾರಿಕೆಗಿಂತಲೂ ಹೆಚ್ಚಾಗಿ ಹತಾಶೆಯ ಕೃತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೌದು ಈ ಬುಧವಾರ ನಡೆದಿದ್ದ ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದಲ್ಲಿ ಯುಪಿ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ 36 ಎಸೆತಗಳನ್ನು ಎದುರಿಸಿ 47 ರನ್ ಕಲೆಹಾಕಿದ್ದರು. ಇನ್ನೂ ಎರಡು ಓವರ್ ಬಾಕಿ ಇತ್ತು. ಉತ್ತಮವಾಗಿ ಆಡುತ್ತಿದ್ದ ಅವರನ್ನು ಕೋಚ್ ಅಭಿಷೇಕ್ ನಾಯರ್ ಬ್ಯಾಟಿಂಗ್ ತೊರೆದು ಹೊರಬರುವಂತೆ ಸೂಚನೆ ನೀಡುತ್ತಾರೆ. ಇದರಿಂದ ಗೊಂದಲಕ್ಕೊಳಗಾದ ಡಿಯೋಲ್ ಅವರು, ‘ನಾನಾ’ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅಭಿಷೇಕ್, ‘ಹೌದು ನೀವೆ’ ಎಂದು ತಿಳಿಸಿದಾಗ ಅವರು ಮೈದಾನದಿಂದ ಹೊರಬರುತ್ತಾರೆ. ನಾಯರ್ ಅವರ ಈ ನಡೆ ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಕಾರಣವಾಗಿದೆ.
ಡಿ.ವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ದಲ್ಲಿ 155 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 158 ರನ್ ಗಳಿಸಿ ಸಂಭ್ರಮಿಸಿತು. ಆಲ್‌ರೌಂಡ್ ಆಟ ಪ್ರದರ್ಶಿಸಿದ ಶಫಾಲಿ ವರ್ಮಾ (16ಕ್ಕೆ 2 ಮತ್ತು 36 ರನ್) ಮತ್ತು ಅರ್ಧಶತಕ ದಾಖಲಿಸಿದ ಲಿಜೆಲ್ ಲೀ ಗೆಲುವಿನಲ್ಲಿ ಮಿಂಚಿದರು. ಜೆಮಿಮಾ ರಾಡ್ರಿಗಸ್ ನಾಯಕತ್ವದ ಡೆಲ್ಲಿ ತಂಡವು ಹಾಲಿ ಆವೃತ್ತಿಯಲ್ಲಿ ಎರಡು ಸೋಲುಗಳ ಬಳಿಕ ಗೆಲುವಿನ ಖಾತೆ ತೆರೆಯಿತು.
