ಉದಯವಾಹಿನಿ , ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ 50 ಓವರ್‌ಗಳ ಸುಲಭದ ಸ್ವರೂಪವನ್ನು ವಿರಾಟ್ ಕೊಹ್ಲಿ ಆಯ್ಕೆ ಮಾಡಿಕೊಂಡಿದ್ದಾರೆಂದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ ಅವರ ಹೇಳಿಕೆಗೆ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡಲು ಏನು ಬೇಕು ಎಂಬುದರ ಬಗ್ಗೆ ಇಂತಹ ಅಭಿಪ್ರಾಯಗಳು ಅನ್ಯಾಯ ಮತ್ತು ತಿರಸ್ಕಾರಾರ್ಹ ಎಂದು ಕರೆದ ಹರ್ಭಜನ್, ಕೊಹ್ಲಿ ಅವರ ಘನತೆ ಮತ್ತು ಸ್ಥಿರತೆಯನ್ನು ಸಮರ್ಥಿಸಿಕೊಂಡರು. ಯಾವುದೇ ಸ್ವರೂಪದಲ್ಲಿ ರನ್ ಗಳಿಸುವುದು ಎಂದಿಗೂ ಸುಲಭವಲ್ಲ ಎಂದು ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಪಿನ್ ದಂತಕತೆ ತಿಳಿಸಿದ್ದಾರೆ.
“ಯಾವುದೇ ಸ್ವರೂಪದಲ್ಲಿ ರನ್ ಗಳಿಸುವುದು ಸುಲಭವಾದರೆ, ಪ್ರತಿಯೊಬ್ಬರೂ ರನ್ ಗಳಿಸುತ್ತಿದ್ದರು. ಜನರು ಏನು ಮಾಡುತ್ತಿದ್ದಾರೆಂದರೂ ಅದನ್ನು ನೀವು ಆನಂದಿಸಬೇಕು. ಅವರು ಚೆನ್ನಾಗಿ ಆಡುತ್ತಿದ್ದಾರೆ, ಪಂದ್ಯಗಳನ್ನು ಗೆಲ್ಲುತ್ತಿದ್ದಾರೆ ಹಾಗೂ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ. ಇಷ್ಟು ಸಾಕು ಅಲ್ಲವೇ? ಆದರೆ, ಯಾರು ಯಾವ ಸ್ವರೂಪದಲ್ಲಿ ಆಡುತ್ತಿದ್ದಾರೆಂಬುದು ಇಲ್ಲಿ ಮುಖ್ಯವಲ್ಲ. ವಿರಾಟ್ ಕೊಹ್ಲಿ ಒಂದು ಸ್ವರೂಪವನ್ನು ಮಾತ್ರ ಆಡಲಿ ಅಥವಾ ಎಲ್ಲಾ ಸ್ವರೂಪದಲ್ಲಿಯೇ ಆಡಲಿ ಅವರು ಅದ್ಭುತ ಆಟಗಾರ ಹಾಗೂ ಅವರು ದೊಡ್ಡ ಮ್ಯಾಚ್ ವಿನ್ನರ್,” ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಅವರು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಾರೆ. ಮಾಂಜ್ರೇಕರ್ ತಮ್ಮದೇ ಆದ ಆಲೋಚನಾ ವಿಧಾನವನ್ನು ಹೊಂದಿದ್ದಾರೆ. ನಾನು ನೋಡುವ ರೀತಿ ವಿರಾಟ್ ಮತ್ತು ಈ ಆಟಗಾರರು ಈ ಆಟವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿರಾಟ್ ನಂಬಲಾಗದ ಆಟಗಾರ. ಇಂದಿಗೂ ಅವರು ಟೆಸ್ಟ್ ಕ್ರಿಕೆಟ್ ಆಡಿದರೆ, ಅವರು ನಮ್ಮ ಪ್ರಮುಖ ಆಟಗಾರರಾಗುತ್ತಾರೆ.
