ಉದಯವಾಹಿನಿ , ಹೊಸಬರ ’ಸುಖೀಭವ’ ಚಿತ್ರದ ಟೀಸರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ದಂಪತಿಗಳಾದ ಸಂತೋಷ್ ಕುಮಾರ್-ಭಾರ್ಗವಿ ಸಂತೋಷ್, ಮಗನ ಹೆಸರಾದ ವೇದ್ ಆರ್ಯನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ.
ಯೋಗರಾಜ್ ಭಟ್ ಸೇರಿದಂತೆ ಅನೇಕರ ಬಳಿ ಸಹಾಯಕರಾಗಿ ಗುರುತಿಸಿಕೊಂಡಿದ್ದ ಮೈಸೂರು ಮೂಲದ ಎನ್.ಕೆ.ರಾಜೇಶ್ ನಾಯ್ಡು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸುಖೀಭವ ಹೆಸರಿನಂತೆ ಪ್ರಾರಂಭದಿಂದಲೂ ಯಾವುದೇ ಅಡೆತಡೆ ಇಲ್ಲದೆ ಎಲ್ಲಾ ಕೆಲಸಗಳು ಸುಗಮವಾಗಿ ಮುಗಿದಿದೆ. ಗೆಳಯ, ಹಿತೈಷಿ ʻರಾಬರ್ಟ್’ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸಗೌಡ ಇವರ ಸ್ಪೂರ್ತಿಯಿಂದಲೇ ನಿರ್ಮಾಣ ಮಾಡಿದೆ ಎನ್ನುತ್ತಾರೆ ಸಂತೋಷ್ ಕುಮಾರ್.
ನಂತರ ಮಾತನಾಡಿದ ನಿರ್ದೇಶಕರು, ಪ್ರೀತಿ, ಭಾವನೆಗಳು, ಹಾಸ್ಯ ಹಾಗೂ ಮನರಂಜನೆಯಿಂದ ಕೂಡಿದ ಚಿತ್ರವಾಗಿದೆ. ಪ್ರಾರಂಭದಲ್ಲಿ ಬೇರೆ ಟೈಟಲ್ ಇಡಲಾಗಿತ್ತು. ಕಥೆ ಬರೆದು ಮುಗಿಸುವಷ್ಟರಲ್ಲೆ ʻಸುಖೀಭವ’ ಆಯಿತು. ಬದುಕಲ್ಲಿ ಮೊದಲ ಪ್ರೀತಿ ಒಳ್ಳೆಯ ಪ್ರೀತಿ ಎನ್ನುತ್ತಾರೆ. ಒಂದು ಹಂತದಲ್ಲಿ ಅರ್ಥವಾಗಿ, ಅದನ್ನು ಹುಡುಕಿಕೊಂಡು ಹೋದಾಗ, ಅದು ಸಿಗುತ್ತದಾ? ಇಲ್ಲವಾ? ಇವೆಲ್ಲಾವನ್ನು ಸಕಾರಾತ್ಮಕ ರೀತಿಯಲ್ಲಿ ಏನು ಹೇಳಬೇಕೋ ಅದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದೊಂದು ಬದುಕಿನ ಪಯಣದ ಸಿನಿಮಾ ಎಂಬುದಾಗಿ ಎನ್.ಕೆ.ರಾಜೇಶ್ ನಾಯ್ಡು ಸಣ್ಣದೊಂದು ಮಾಹಿತಿ ಬಿಚ್ಚಿಟ್ಟರು.
