ಉದಯವಾಹಿನಿ , ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಅನೂಪ್ ರೂಬೆನ್ಸ್ , ತಮ್ಮ ಸುಮಧುರ ಸಂಗೀತದ ಮೂಲಕ ದಕ್ಷಿಣ ಭಾರತದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಇವರು, ಇದೀಗ ಕನ್ನಡ ಚಿತ್ರರಂಗದಲ್ಲೂ ತಮ್ಮ ವಿಶಿಷ್ಟ ಛಾಪನ್ನು ಮೂಡಿಸುತ್ತಿದ್ದಾರೆ. ಅನೂಪ್ ರೂಬೆನ್ಸ್ ಭಾವನಾತ್ಮಕ ಮತ್ತು ಸುಮಧುರ ರಾಗಗಳಿಗೆ ಹೆಸರಾದವರು. ಇವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಇಷ್ಕ್, ಪ್ರೇಮ ಕಾವಲಿ, ಗುಂಡೆ ಜಾರಿ ಗಲ್ಲಂತಯ್ಯಿಂದೆ, ಮನಂ, ಗೋಪಾಲ ಗೋಪಾಲ, ಸೊಗ್ಗಾಡೆ ಚಿನ್ನಿ ನಾಯನಾ ಮತ್ತು 30 ರೋಜುಲ್ಲೋ ಪ್ರೇಮಿಂಚಡಂ ಎಲಾ ಅಂತಹ ಚಿತ್ರಗಳು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಅಚ್ಚೊತ್ತಿವೆ.
ತೆಲುಗಿನ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ಅನೂಪ್ ಅವರು ಹಿಟ್ ಹಾಡುಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಪ್ರಮುಖ ಕನ್ನಡ ಚಿತ್ರಗಳ ಬಗ್ಗೆ ನೋಡುತ್ತ ಹೋದರೆ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ, ʻಖುಷಿ ಖುಷಿಯಾಗಿʼ ಈ ಚಿತ್ರದ ಅರೆ ಅರೆ ಮತ್ತೆ ಹೃದಯ ಹಾಡಿತು ಹಾಡು ಬಿಡುಗಡೆಯಾದ ಸಮಯದಲ್ಲಿ ದೊಡ್ಡ ಮಟ್ಟದ ಹಿಟ್ ಆಗಿತ್ತು. ಇಂದಿಗೂ ಇದು ಕನ್ನಡದ ಮೆಲೋಡಿ ಹಾಡುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ನಿಖಿಲ್ ಕುಮಾರಸ್ವಾಮಿ ನಟನೆಯ ಸೀತಾರಾಮ ಕಲ್ಯಾಣ ಈ ಚಿತ್ರದ ನಿನ್ನ ರಾಜ ನಾನು ನನ್ನ ರಾಣಿ ನೀನು ರೋಮ್ಯಾಂಟಿಕ್ ಹಾಡು ಕರ್ನಾಟಕದಾದ್ಯಂತ ಅಬ್ಬರಿಸಿತ್ತು. ಹಳ್ಳಿ-ಹಳ್ಳಿಗಳಲ್ಲೂ ಈ ಹಾಡು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ರೀತಿ ಗೀತಾ ಚಿತ್ರದ ಮೂಲಕವೂ ಅನೂಪ್ ತಮ್ಮ ಸಂಗೀತದ ವೈವಿಧ್ಯತೆಯನ್ನು ಸಾಬೀತುಪಡಿಸಿದ್ದರು.
