ಉದಯವಾಹಿನಿ, ಇಂದೋರ್: `ಅತ್ಯಾಚಾರ ಪ್ರಕರಣಗಳಿಗೆ ಸುಂದರ ಹುಡುಗಿಯರೇ ಕಾರಣʼ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರೈಯ್ಯಾ ಹೇಳಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಸಂಘಟನೆಗಳಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಬರೈಯ್ಯಾ, ಅತ್ಯಾಚಾರಕ್ಕೆ ಜಾತಿ ಮತ್ತು ಧರ್ಮದ ವ್ಯಾಖ್ಯಾನವನ್ನೂ ನೀಡಿದ್ದಾರೆ. ಭಾರತದಲ್ಲಿ ಬಹುತೇಕ ರೇಪ್ ಸಂತ್ರಸ್ತರು ಯಾರು…? ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದವರೇ ಸಂತ್ರಸ್ತರು. ಏಕೆ ಹೀಗಾಗ್ತಿದೆ ಅಂತ ನೋಡಿದಾಗ, ಯಾವುದೇ ಒಬ್ಬ ಪುರುಷ ರಸ್ತೆಯಲ್ಲಿ ಹೋಗುವಾಗ ಸುಂದರ ಸುಂದರ ಹುಡುಗಿಯನ್ನ ನೋಡಿದ್ರೆ ಅವನ ಮನಸ್ಸು ಚಂಚಲಗೊಳ್ಳುತ್ತದೆ, ಇದರಿಂದ ಅವನು ದಾರಿ ತಪ್ಪುತ್ತಾನೆ. ಅಲ್ಲದೇ ಈ ಚಂಚಲತೆ ಅತ್ಯಾಚಾರಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ ಬರೈಯ್ಯಾ. ʻRudrayamal Tantraʼ ಪುಸ್ತಕ ಉಲ್ಲೇಖಿಸಿ ಮಾತನಾಡಿದ ಶಾಸಕ, ಕೆಲ ಸಮುದಾಯದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ತಮಗೆ ತೀರ್ಥಯಾತ್ರೆಗೆ ಸಮಾನವಾದ ಆಧ್ಯಾತ್ಮಿಕ ಅರ್ಹತೆ ತರುತ್ತದೆ ಎಂದು ಅಪರಾಧಿಗಳು ನಂಬುತ್ತಾರೆ. ಅಲ್ಲದೇ ಅತ್ಯಾಚಾರವನ್ನ ವ್ಯಕ್ತಿಗಳಿಗಿಂತ ಗುಂಪುಗಳು ಹೆಚ್ಚಾಗಿ ಮಾಡುತ್ತವೆ. ಇಂತಹ ಅಪರಾಧಗಳು ವಿಕೃತ ಮನಸ್ಥಿತಿಯಿಂದ ಉಂಟಾಗುತ್ತವೆ ಎಂದಿದ್ದಾರೆ.
ಮುಂದುವರಿದು… ಭಾರತದಲ್ಲಿ ಅತ್ಯಾಚಾರಕ್ಕೆ ಹೆಚ್ಚು ಬಲಿಯಾದವರು ಯಾರು? ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದ (SC, ST, OBC Community) ಮಹಿಳೆಯರು. ಸುಂದರ ಹುಡುಗಿಯನ್ನು ರಸ್ತೆಯಲ್ಲಿ ನೋಡಿದಾಗ ಸೆಳೆತಕ್ಕೊಳಗಾಗಿ ರೇಪ್ ಮಾಡುತ್ತಾರೆ. ಆದ್ರೆ ಮೇಲಿನ ಸಮಯದಾಯಗಳಲ್ಲಿ ಮಹಿಳೆಯರು ಸುಂದರವಾಗಿಲ್ಲದಿದ್ದರೂ, ಅವರ ಧರ್ಮಗ್ರಂಥಗಳಲ್ಲಿ ಬರೆಯಲ್ಪಟ್ಟಿರುವುದರಿಂದ ಅತ್ಯಾಚಾರಗಳು ನಡೆಯುತ್ತಿವೆ ಎಂದು ʻರೇಪ್ ಥಿಯರಿʼ ವಿಶ್ಲೇಷಣೆ ಮಾಡಿದ್ದಾರೆ. ಈ ಜಾತಿಯ ಮಹಿಳೆಯೊಂದಿಗೆ ಸಂಭೋಗಿಸಿದರೆ, ನೀವು ತೀರ್ಥಯಾತ್ರೆಯ ಪ್ರತಿಫಲ ಪಡೆಯುತ್ತೀರಿ ಎಂದು ಧರ್ಮಗ್ರಂಥದಲ್ಲಿ ಬರೆಯಲಾಗಿದೆ. ತೀರ್ಥಯಾತ್ರೆಗೆ ಹೋಗಲು ಸಾಧ್ಯವಾಗದವರು ಈ ರೀತಿ ಅತ್ಯಾಚಾರ ಎಸಗುತ್ತಿದ್ದಾರೆ. ಇದು ಮಕ್ಕಳ ಮೇಲೂ ನಡೆಯುತ್ತಿವೆ ಎಂದು ವಿವರಿಸಿದ್ದಾರೆ.
