ಉದಯವಾಹಿನಿ, ಕೋಲ್ಕತ್ತಾ: ಭಾರತದ Gen Z ಪೀಳಿಗೆ ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ ಎಂದು ಬಂಗಾಳದಲ್ಲಿ ಬಿಎಂಸಿಯ ದೊಡ್ಡ ವಿಜಯವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತದ Gen Z ಬಿಜೆಪಿಯ ಅಭಿವೃದ್ಧಿ ಕ್ರಮದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಇತ್ತೀಚೆಗೆ ಮುಂಬೈನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಭರ್ಜರಿ ಜಯವನ್ನು ಉಲ್ಲೇಖಿಸಿದ್ದಾರೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ದಾಖಲೆಯ ಗೆಲುವು ಸಾಧಿಸಿದೆ ಎಂದು ಹೇಳಿದ್ದಾರೆ. ಬಂಗಾಳದ ಮತದಾರರು ಈ ಬಾರಿ ಬಿಜೆಪಿಯನ್ನು ಆಯ್ಕೆ ಮಾಡುತ್ತಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಗಾಳದಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದ ಮಮತಾ ಬ್ಯಾನರ್ಜಿ ಸರ್ಕಾರವನ್ನು ಟೀಕಿಸಿದ ಮೋದಿ, ಈ ತೃಣಮೂಲ ಸರ್ಕಾರವನ್ನು ಬದಲಾಯಿಸಬೇಕಾಗಿದೆ ಎಂದು ಮಾತನಾಡಿದ್ದಾರೆ.
ಹೃದಯಹೀನ ಮತ್ತು ಕ್ರೂರ ತೃಣಮೂಲ ಸರ್ಕಾರವು ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿದೆ. ಕೇಂದ್ರದ ನೆರವು ಬಂಗಾಳದ ಜನರನ್ನು ತಲುಪದಂತೆ ತಡೆಯುತ್ತಿದೆ. ತೃಣಮೂಲವನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಬಂಗಾಳದಲ್ಲಿ ಅಭಿವೃದ್ಧಿ ಬರುತ್ತದೆ ಎಂದು ಪ್ರತಿಪಾದಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಒಳನುಸುಳುಕೋರರನ್ನು ರಕ್ಷಿಸುತ್ತಿದೆ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಳನುಸುಳುವಿಕೆ ವಿರುದ್ಧ ದೊಡ್ಡ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
