ಉದಯವಾಹಿನಿ, ಶ್ರೇಯಾಂಕಾ ಪಾಟೀಲ್ 5 ಗೊಂಚಲು ವಿಕೆಟ್ ಸಾಧನೆ ಹಾಗೂ ರಾಧಾ ಯಾದವ್, ರಿಚಾ ಘೋಷ್ ಅವರ ಶತಕದ ಜೊತೆಯಾಟ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ, ಗುಜರಾತ್ ಜೈಂಟ್ಸ್ ವಿರುದ್ಧ 32 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಈ ಆವೃತ್ತಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸುವ ಮೂಲಕ ಅಜೇಯ ಓಟ ಮುಂದುವರಿಸಿದೆ. ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. 183 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ 18.5 ಓವರ್‌ಗಳಲ್ಲಿ 150 ರನ್‌ಗಳಿಗೆ ಸರ್ವಪತನ ಕಂಡು, ಸೋಲೊಪ್ಪಿಕೊಂಡಿತು.
ಚೇಸಿಂಗ್ ಆರಂಭಿಸಿದ ಗುಜರಾತ್ ಮೊದಲ 3 ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೇ 32 ರನ್ ಬಾರಿಸಿತ್ತು. ಆದ್ರೆ 4ನೇ ಓವರ್‌ನಲ್ಲಿ ಸೋಫಿ ಡಿವೈನ್ ವಿಕೆಟ್ ಬೀಳುತ್ತಿದ್ದಂತೆ ಪೆವಲಿಯನ್ ಪರೇಡ್ ಶುರುವಾಯಿತು. ಬಳಿಕ ಬೆತ್ ಮೂನಿ, ಕ್ಯಾಪ್ಟನ್ ಆಶ್ಲೆ ಗಾರ್ಡ್ನರ್ ಅವರ ವಿಕೆಟ್ ಪತನಗೊಂಡವು. ಇದರೊಂದಿಗೆ ಆರ್‌ಸಿಬಿ ಪುಟ್ಟಿ ಶ್ರೇಯಾಂಕಾ ಪಾಟೀಲ್ ಅವರ ಸ್ಪಿನ್ ಮ್ಯಾಜಿಕ್ ಗುಜರಾತ್ ತಂಡದ ವಿರುದ್ಧ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು. ಕೊನೆಗೆ ಗುಜರಾತ್ 150 ರನ್‌ಗಳಿಗೆ ಆಲೌಟ್ ಆಯಿತು.
ಗುಜರಾತ್ ಪರ ಭಾರತಿ ಫುಲ್ಮಾಲಿ 39 ರನ್, ತನುಜಾ ಕನ್ವರ್ 21 ರನ್ ಗಳಿಸಿದ್ದು ಬಿಟ್ಟರೆ, ಉಳಿದವರು ಅಲ್ಪ ಮೊತ್ತಕ್ಕೆ ಔಟಾದರು.
