ಉದಯವಾಹಿನಿ, ಇಂಫಾಲ್: ಮಣಿಪುರದಲ್ಲಿ 2 ವರ್ಷಗಳ ಹಿಂದೆ ಕಿಡ್ನ್ಯಾಪ್‌ ಆಗಿ ಸಾಮೂಹಿಕ ಅತ್ಯಾಚಾರ ಒಳಗಾಗಿದ್ದ ಕುಕಿ ಮಹಿಳೆ ಸಾವನ್ನಪ್ಪಿದ್ದಾರೆ. 2023ರ ಮೇ ತಿಂಗಳಲ್ಲಿ ಮೈತೇಯಿ-ಕುಕಿ ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ಸಂದರ್ಭದಲ್ಲಿ ಮಣಿಪುರದ ರಾಜಧಾನಿ ಇಂಫಾಲ್‌ನಿಂದ ಪುರುಷರ ಗುಂಪೊಂದು ಕುಕಿ ಬುಡಕಟ್ಟು ಜನಾಂಗದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆಘಾತಗೊಂಡು ಅನಾರೋಗ್ಯದಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಎರಡು ವರ್ಷಗಳ ಹಿಂದೆ ಆದ ಆಘಾತ ಮತ್ತು ದೈಹಿಕ ಗಾಯಗಳಿಂದ ಮಹಿಳೆ ಚೇತರಿಸಿಕೊಂಡಿರಲಿಲ್ಲ. ಇದು ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿತು ಎಂದು ಕುಟುಂಬ ದುಃಖ ವ್ಯಕ್ತಪಡಿಸಿದೆ.
ಸಂತ್ರಸ್ತ ಮಹಿಳೆ ಪವಾಡಸದೃಶವಾಗಿ ಬದುಕುಳಿದಿದ್ದರೂ, ತೀವ್ರ ದೈಹಿಕ ಗಾಯಗಳಿಂದ ಬಳಲಿದ್ದರು. ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಗಂಭೀರ ಗರ್ಭಾಶಯದ ತೊಂದರೆಗಳನ್ನು ಅನುಭವಿಸಿದ್ದರು. ಮಹಿಳೆಗೆ ಗುವಾಹಟಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಈಗ ಜ.10 ರಂದು ಮೃತಪಟ್ಟಿದ್ದಾರೆ. ಈ ಭಯಾನಕ ದೌರ್ಜನ್ಯಕ್ಕೆ ಒಳಗಾಗುವ ಮೊದಲು ನನ್ನ ಮಗಳು ತುಂಬಾ ಉತ್ಸಾಹಭರಿತ ಮತ್ತು ಮುಕ್ತ ಮನಸ್ಸಿನ ಹುಡುಗಿಯಾಗಿದ್ದಳು. ಅವಳಿಗೆ ನಿಜವಾಗಿಯೂ ಶೈಕ್ಷಣಿಕ ವಿಷಯದಲ್ಲಿ ಆಸಕ್ತಿ ಇರಲಿಲ್ಲ. ಆದರೆ, ಅವಳು ನಮ್ಮ ಸಂಬಂಧಿಕರೊಬ್ಬರ ಜೊತೆ ಇಂಫಾಲ್‌ನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಅನೇಕ ಸ್ನೇಹಿತರಿದ್ದರು. ಆಗಾಗ್ಗೆ ಅವರೊಂದಿಗೆ ಸಮಯ ಕಳೆಯುತ್ತಿದ್ದಳು. ನನ್ನ ಮಗಳು ಯಾವಾಗಲೂ ನಗು ಮುಖದವಳಾಗಿದ್ದಳು. ಆದರೆ, ಆ ಘಟನೆಯ ನಂತರ ಅವಳು ತನ್ನ ನಗುವನ್ನೇ ಕಳೆದುಕೊಂಡಿದ್ದಳು ಎಂದು ತಾಯಿ ದುಃಖ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!