ಉದಯವಾಹಿನಿ, ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಂಡಿಗೋ ವಿಮಾನಗಳ ಸಂಚಾರ ಸೇವೆಯಲ್ಲಿ ಉಂಟಾದ ಭಾರಿ ವ್ಯತ್ಯಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇಂಡಿಗೋ ಸಂಸ್ಥೆಗೆ ಬರೋಬ್ಬರಿ 22.20 ಕೋಟಿ ರೂ. ದಂಡ ವಿಧಿಸಿದೆ.
ಕಳೆದ ವರ್ಷದ ಡಿಸೆಂಬರ್ 3 ರಿಂದ 5 ರ ವರೆಗೆ ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. 2,507 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು, ಜೊತೆಗೆ 1,852 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿತ್ತು. ಇದರಿಂದ 3 ಲಕ್ಷಕ್ಕೂ ಅಧಿಕ ಪ್ರಯಾಣಿಕರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಿಲುಕಿ, ಪರದಾಡಿದ್ದರು. ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶನದ ಮೇರೆಗೆ ಡಿಜಿಸಿಎ ನೇಮಿಸಿದ್ದ ನಾಲ್ವರು ಸದಸ್ಯರ ಸಮಿತಿ ನೀಡಿದ ಶಿಫಾರಸುಗಳನ್ನ ಆಧರಿಸಿ ಶುಲ್ಕ ವಿಧಿಸುವ ಕ್ರಮ ಜರುಗಿಸಲಾಗಿದೆ.
ಇಂಡಿಗೋ ವಿಮಾನಗಳ ಕಾರ್ಯಾಚರಣೆ ವ್ಯತ್ಯಯಕ್ಕೆ ಕಾರಣವಾದ ಅಂಶಗಳ ಮೌಲ್ಯಮಾಪನವನ್ನು ಈ ಸಮಿತಿ ಮಾಡಿತ್ತು. ತನಿಖೆಯಲ್ಲಿ ಇಂಡಿಗೋ ಆಡಳಿತ ಮಂಡಳಿಯ ಯೋಜನೆ, ಕಾರ್ಯಾಚರಣೆ ಮತ್ತು ನಿಯಂತ್ರಣ ವೈಫಲ್ಯಗಳು ಪತ್ತೆಯಾಗಿದ್ದವು. ಇದರ ಆಧಾರದ ಮೇಲೆ ಡಿಜಿಸಿಎ ಕಠಿಣ ಕ್ರಮ ಜರುಗಿಸಿದೆ.
