ಉದಯವಾಹಿನಿ,: ಗಾಜಿಪುರ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂವಿನ ಹತ್ಯೆಯಾಗಿದೆ. ಬಾಳೆಹಣ್ಣಿನ ಬಗ್ಗೆ ಜಗಳ ನಡೆದು ಹಿಂದೂ ಉದ್ಯಮಿಯೊಬ್ಬರನ್ನು ಹೊಡೆದು ಕೊಲೆ ಮಾಡಲಾಗಿದೆ. ಒಂದೇ ಕುಟುಂಬದ ಮೂವರು ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಜಿಪುರದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ‘ಬೈಶಾಖಿ ಸ್ವೀಟ್‌ಮೀಟ್ ಮತ್ತು ಹೋಟೆಲ್’ ಮಾಲೀಕ ಲಿಟನ್ ಚಂದ್ರ ಘೋಷ್ (55) ಎಂದು ಗುರುತಿಸಲಾಗಿದೆ. ಈ ಸಂಬಂಧ ಸ್ವಪನ್ ಮಿಯಾ (55) ಅವರ ಪತ್ನಿ ಮಜೇದಾ ಖಾತುನ್ (45), ಮತ್ತು ಅವರ ಮಗ ಮಾಸುಮ್ ಮಿಯಾ (28) ಬಂಧಿಸಲಾಗಿದೆ ಎಂದು ಕಾಳಿಗಂಜ್ ಪೊಲೀಸ್ ಠಾಣೆಯ ಅಧಿಕಾರಿ ಜಾಕಿರ್ ಹೊಸೈನ್ ತಿಳಿಸಿದ್ದಾರೆ. ಬಾಳೆ ತೋಟ ಹೊಂದಿದ್ದ ಮಾಸುಮ್, ಒಂದು ಬಂಚ್ ಬಾಳೆಹಣ್ಣು ಕಾಣೆಯಾಗಿದೆ ಎಂದು ಅದಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಲಿಟ್ಟನ್ ಹೋಟೆಲ್ ನಲ್ಲಿ ಇರುವುದನ್ನು ನೋಡಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳ ತಾರಕಕ್ಕೇರಿದೆ.
ಬೆಳಗ್ಗೆ ಸುಮಾರು 11 ಗಂಟೆಗೆ ಹೋಟೆಲ್ ಗೆ ಭೇಟಿ ನೀಡಿದ ಮಾಸುಮ್, ಕ್ಷುಲ್ಲಕ ಘಟನೆ ಕುರಿತು ಸಿಬ್ಬಂದಿ ಸದಸ್ಯ ಅನಂತ ದಾಸ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ, ಆತನ ಪೋಷಕರು ಅಲ್ಲಿಗೆ ಹೋಗಿದ್ದಾರೆ. ಬಳಿಕ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ್ದು, ಪರಿಸ್ಥಿತಿಯನ್ನು ಶಮನಗೊಳಿಸಲು ಲಿಟನ್ ಮುಂದಾಗ ಆತನ ಮೇಲೆ ಹಲ್ಲೆ ನಡೆದಿದೆ.
ಆರೋಪಿ ಲಿಟನ್ ಗೆ ಗುದ್ದಿದ್ದು, ಒದ್ದಿದ್ದರಿಂದ ಆತ ನೆಲಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
