ಉದಯವಾಹಿನಿ,: ಕೈರೋ: ಗಾಜಾದಲ್ಲಿ ಪ್ಯಾಲೆಸ್ತೀನಿಯನ್ನರಿಗೆ ಅಗೋಚರವಾಗಿರುವ ವಿಭಜಿಸುವ ರೇಖೆ(yellow line) ಅಪಾಯಕಾರಿಯಾಗಿ ಪರಿಣಮಿಸಿದ್ದು, ಅನೇಕರು ಇಸ್ರೇಲ್ ಪಡೆಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವುದು ಬಹಿರಂಗವಾಗಿದೆ.
ಅಕ್ಟೋಬರ್ ನಲ್ಲಿ ಜಾರಿಯಾದ ಕದನ ವಿರಾಮದ ಭಾಗವಾಗಿ ಇಸ್ರೇಲಿ ಮಿಲಿಟರಿ ಹಿಂತೆಗೆದುಕೊಂಡ ಪ್ರದೇಶದ “ಹಳದಿ ರೇಖೆ” ದಾಟುವವರ ಮೇಲೆ ಇಸ್ರೇಲಿ ಸೈನಿಕರು ಪ್ರತಿದಿನ ಗುಂಡು ಹಾರಿಸುತ್ತಿರುವುದರಿಂದ ಭಯದಿಂದ ಬದುಕುತ್ತಿದ್ದೇವೆ ಪ್ಯಾಲೆಸ್ತೀನಿಯರು ಹೇಳಿದ್ದಾರೆ.
ಕದನ ವಿರಾಮ ಜಾರಿಗೆ ಬಂದ ನಂತರ ಹತ್ಯೆಗೀಡಾದ 447 ಪ್ಯಾಲೆಸ್ತೀನಿಯನ್ನರಲ್ಲಿ, ಕನಿಷ್ಠ 77 ಜನರು ರೇಖೆಯ ಬಳಿ ಇಸ್ರೇಲಿ ಪಡೆಗಳ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ 62 ಜನರು ಗಡಿ ದಾಟಿದವರು ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಸಾವನ್ನಪ್ಪಿದವರಲ್ಲಿ ಹದಿಹರೆಯದವರು ಮತ್ತು ಚಿಕ್ಕ ಮಕ್ಕಳು ಸೇರಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಪ್ಯಾಲೆಸ್ತೀನ್ ವಲಯದ ಮಿತಿಗಳನ್ನು ಗುರುತಿಸಲು ಸೇನೆಯು ಕೆಲವು ಹಳದಿ ಬ್ಯಾರೆಲ್‌ಗಳು ಮತ್ತು ಕಾಂಕ್ರೀಟ್ ತಡೆಗೋಡೆಗಳನ್ನು ಇರಿಸಿದ್ದರೂ, ಕೆಲವು ಸ್ಥಳಗಳಲ್ಲಿ ರೇಖೆಯನ್ನು ಇನ್ನೂ ಗುರುತಿಸಲಾಗಿಲ್ಲ. ಇತರ ಸ್ಥಳಗಳಲ್ಲಿ ಕದನ ವಿರಾಮ ಒಪ್ಪಂದದಲ್ಲಿ ಒಪ್ಪಿಕೊಂಡಿದ್ದಕ್ಕಿಂತ ಸುಮಾರು ಅರ್ಧ ಕಿಲೋಮೀಟರ್ (0.3 ಮೈಲುಗಳು) ಆಳದಲ್ಲಿ ಹಾಕಲಾಗಿದ್ದು ಪ್ಯಾಲೆಸ್ತೀನಿಯನ್ನರು ಮತ್ತು ಮ್ಯಾಪಿಂಗ್ ತಜ್ಞರ ಪ್ರಕಾರ ಇಸ್ರೇಲ್ ನಿಯಂತ್ರಿಸುವ ಗಾಜಾದ ಭಾಗವನ್ನು ವಿಸ್ತರಿಸಿದೆ ಎನ್ನಲಾಗಿದೆ.
ಮಂಗಳವಾರದ ವೇಳೆಗೆ, ಹಳದಿ ರೇಖೆಯ ಸುತ್ತ 57 ಮಂದಿಯನ್ನು ಹತ್ಯೆಗಿದಿರುವುದಾಗಿ ಇಸ್ರೇಲ್ ಸೇನೆ ಒಪ್ಪಿಕೊಂಡಿದ್ದು, ಅವರಲ್ಲಿ ಹೆಚ್ಚಿನವರು ಉಗ್ರಗಾಮಿಗಳು ಎಂದು ಹೇಳಿದೆ. ಉಗ್ರಗಾಮಿ ಗುಂಪುಗಳನ್ನು ಎದುರಿಸಲು ತನ್ನ ಪಡೆಗಳು ನಿಯಮಗಳನ್ನು ಪಾಲಿಸುತ್ತಿವೆ ಮತ್ತು ಘರ್ಷಣೆಯನ್ನು ಕಡಿಮೆ ಮಾಡಲು ಮತ್ತು ತಪ್ಪುಗ್ರಹಿಕೆಯನ್ನು ತಡೆಯಲು ಪ್ಯಾಲೆಸ್ತೀನಿಯನ್ನರಿಗೆ ರೇಖೆಯ ಸ್ಥಳವನ್ನು ತಿಳಿಸುತ್ತಿವೆ ಮತ್ತು ನೆಲದ ಮೇಲೂ ಅದನ್ನು ಗುರುತಿಸುತ್ತಿವೆ ಎಂದೂ ಹೇಳಿದೆ.

Leave a Reply

Your email address will not be published. Required fields are marked *

error: Content is protected !!