ಉದಯವಾಹಿನಿ, ಬೆಂಗಳೂರು: ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಗಳು ಬ್ಯಾಲೆಟ್ ಪೇಪರ್‌ನಲ್ಲೇ ನಡೆಯಲಿದೆ ಎಂದು ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶ್ ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಮಾತ್ರ ಇವಿಎಂ ಮಾಡಿದ್ದೇವೆ. ಬ್ಯಾಲೆಟ್ ಪೇಪರ್‌ನಲ್ಲಿ ಮಾಡಬಾರದು ಅಂತೇನಿಲ್ಲ. ಮುಂಬರುವ ಜಿಬಿಎ ಎಲೆಕ್ಷನ್, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಕೂಡ ಬ್ಯಾಲೆಟ್ ಪೇಪರ್‌ನಲ್ಲೇ ನಡೆಯಲಿದೆ ಎಂದರು.
ಮೇ ಅಥವಾ ಜೂನ್ ನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಮಾಡಬೇಕು ಅಂತ ಇದ್ದೇವೆ. ಡಿ ಲಿಮಿಟೇಷನ್ ರಿಪೋರ್ಟ್ ಸರ್ಕಾರ ನಮಗೆ ಸಲ್ಲಿಸಬೇಕಿದೆ. ಜನವರಿ 30ಕ್ಕೆ ಕೋರ್ಟ್ ಅಲ್ಲಿ ಒಂದು ಪಿಟಿಷನ್ ಇದೆ. ಅದು ಆದ ಬಳಿಕ ಮಾಡಬೇಕು ಅಂತಾ ಇದ್ದೇವೆ. ಗ್ರಾಮ ಪಂಚಾಯ್ತಿ ಚುನಾವಣೆ ಕೂಡ ಮಾಡಬೇಕು ಅಂತಿದ್ದು, ಅದೂ ಬ್ಯಾಲೆಟ್ ಪೇಪರ್‌ನಲ್ಲೇ ಇರುತ್ತೆ. ಸಾಕಷ್ಟು ಜನ ಬ್ಯಾಲೆಟ್‌ನಲ್ಲಿ ಮಾಡಿ, ಇವಿಎಂನಲ್ಲಿ (EVM) ಮಾಡಿ ಅಂತ ಪತ್ರ ಬರೆದಿದ್ರು. ಆದ್ರೆ ಬ್ಯಾಲೆಟ್ ಸೂಕ್ತ ಅನ್ನಿಸಿದೆ ಎಂದು ವಿವರಿಸಿದರು.
