ಉದಯವಾಹಿನಿ, ಕೋಲ್ಕತ್ತಾ: ಹೃದಯ ಹೀನ ತೃಣಮೂಲ ಕಾಂಗ್ರೆಸ್‌ಗೆ ಜನ ಸದ್ಯದಲ್ಲೇ ತಕ್ಕ ಪಾಠ ಕಲಿಸುತ್ತಾರೆ. 15 ವರ್ಷಗಳ ʻಮಹಾ ಜಂಗಲ್‌ ರಾಜ್‌ʼ ಯುಗವನ್ನ ಕೊನೆಗೊಳಿಸುತ್ತಾರೆ. ಏಕೆಂದ್ರೆ ಬಿಜೆಪಿ ಮಾತ್ರ ಬಂಗಾಳ ಅಭಿವೃದ್ಧಿಯ ಬಗ್ಗೆ ನಿಜವಾದ ಕಾಳಜಿ ಹೊಂದಿದೆ ಎಂಬುದು ಗೊತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು. ಬಂಗಾಳದ ಹೂಗ್ಲಿಯ ಸಿಂಗೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ನಿಜವಾದ ಬದಲಾವಣೆಯನ್ನ ಜನ ಬಯಸಿದ್ದಾರೆ, ಅದಕ್ಕಾಗಿ ಎಲ್ಲಾ ವರ್ಗದ ಜನರು ಒಟ್ಟುಗೂಡಿದ್ದಾರೆ ಎಂದರು.

ಬಿಜೆಪಿ ಆಡಳಿತದಲ್ಲಿ ಬಂಗಾಳಿಗೆ ಪ್ರಾದೇಶಿಕ ಭಾಷೆಯ ಪ್ರಾಮುಖ್ಯತೆ ನೀಡಲಾಯಿತು. ದುರ್ಗಾ ಪೂಜೆಗೆ ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಸಿಗುವಂತೆ ಮಾಡಲಾಯಿತು. ದೆಹಲಿಯ ಕರ್ತವ್ಯ ಪಥ್‌ನಲ್ಲಿರುವ ಇಂಡಿಯಾ ಗೇಟ್‌ ಮುಂಭಾಗ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪ್ರತಿಮೆಯನ್ನೂ ಸ್ಥಾಪಿಸಲಾಯಿತು. ಆದ್ರೆ ಟಿಎಂಸಿ ಕಾಂಗ್ರೆಸ್ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾಗ ಇದ್ಯಾವುದನ್ನೂ ಮಾಡಲಿಲ್ಲ ಎಂದು ಕಿಡಿ ಕಾರಿದರು.
ಟಿಎಂಸಿ ದ್ವೇಷ ಜನರ ಮೇಲೆ ಪರಿಣಾಮ ಬೀರುತ್ತಿದೆ: ಟಿಎಂಸಿಗೆ ಬಿಜೆಪಿ ಮೇಲೆ ದ್ವೇಷ ಇದೆ. ಆದ್ರೆ ಬಿಜೆಪಿಯೊಂದಿಗಿನ ತನ್ನ ದ್ವೇಷವು ಪಶ್ಚಿಮ ಬಂಗಾಳದ ಜನರ ಮೇಲೆ ಬೀರುತ್ತಿದೆ. ಟಿಎಂಸಿಗೆ ಮೋದಿ ಮತ್ತು ಬಿಜೆಪಿಯೊಂದಿಗೆ ಭಿನ್ನ ಇರಬಹುದು, ಆದ್ರೆ ಇದು ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದೆ. ಇಲ್ಲಿನ ಮೀನುಗಾರರ ಕಲ್ಯಾಣಕ್ಕಾಗಿ ಟಿಎಂಸಿ ಕೇಂದ್ರ ಬಿಜೆಪಿಯೊಂದಿಗೆ ಸಹಕರಿಸುತ್ತಿಲ್ಲ. ಆದ್ದರಿಂದ ಮೀನುಗಾರರು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಪ್ರಯೋಜನಗಳನ್ನ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಪಿಎಂ ಶ್ರೀ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನೂ ಮಮತಾ ಬ್ಯಾನರ್ಜಿ ಸರ್ಕಾರ ನಿರಾಕರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!