ಉದಯವಾಹಿನಿ, ಮುಂಬೈ: ಭಾರತ ನನ್ನ ಸ್ಫೂರ್ತಿ, ತವರು. ಆದರೆ ಕೆಲವೊಮ್ಮೆ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಲ್ಪಡಬಹುದು ಎಂದು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಮ್ಮ ಹೇಳಿಕೆಗಳ ಕುರಿತು ಕೇಳಿಬಂದಿದ್ದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸಂಗೀತ ಯಾವಾಗಲೂ ನಮ್ಮ ಸಂಸ್ಕೃತಿಯನ್ನು ಆಚರಿಸಲು ಹಾಗೂ ಗೌರವಿಸಲು ಒಂದು ಮಾರ್ಗ. ಅದರಂತೆ ನನ್ನ ಬದುಕಿನಲ್ಲಿ ಸಂಗೀತ ಯಾವಾಗಲೂ ಶಕ್ತಿಯಂತೆ ನನಗೆ ಬೆನ್ನೆಲುಬಾಗಿ ನಿಂತಿದೆ. ಭಾರತ ನನ್ನ ಸ್ಫೂರ್ತಿ, ನನ್ನ ಶಿಕ್ಷಕಿ ಮತ್ತು ನನ್ನ ತವರು, ಆದರೆ ಕೆಲವೊಮ್ಮೆ ನನ್ನ ಹೇಳಿಕೆಯ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಲ್ಪಡಬಹುದು. ನಿಜಕ್ಕೂ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ದೇಶಕ್ಕೆ ಸೇವೆ ಸಲ್ಲಿಸುವುದಾಗಿದೆ. ನಾನು ಎಂದಿಗೂ ನೋವನ್ನುಂಟು ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಜೊತೆಗೆ ನನ್ನ ಕಲಾತ್ಮಕ ಯೋಜನೆಗಳ ಮೂಲಕ ಭಾರತದ ವೈವಿಧ್ಯತೆಯನ್ನು ಸಂಭ್ರಮಿಸಿ, ಅದನ್ನು ಉಳಿಸುವ ಕೆಲಸ ಮಾಡುವುದಾಗಿ, ದೇಶಕ್ಕೆ ಕೃತಜ್ಞತೆ ಸಲ್ಲಿಸಿ, ಸಂಗೀತದ ಮೂಲಕ ಭಾರತದ ಘನತೆಯನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಬಾಲಿವುಡ್‌ನಲ್ಲಿ ತಾರತಮ್ಯದ ಬಗ್ಗೆ ತಾವು ನೀಡಿದ್ದ ಹೇಳಿಕೆಗಳು ಟೀಕೆಗೆ ಎಡೆ ಮಾಡಿಕೊಟ್ಟಿದ್ದವು. ಇದೀಗ ಈ ಹೇಳಿಕೆಯ ಕುರಿತು ತಮ್ಮ ನಿಲುವನ್ನು ವಿವರಿಸಿದ್ದಾರೆ.
