ಉದಯವಾಹಿನಿ, ನವಾಡ(ಬಿಹಾರ): ಈ ಕಂಪನಿಯ ಹೆಸರು ‘ಮೈನಸ್ ಡಿಗ್ರಿ’. ಇದು ತಿಂಗಳಿಗೆ 10 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಟೈಲ್ಸ್, ಪೀಠೋಪಕರಣಗಳು, ಟ್ರೋಫಿಗಳು ಮತ್ತು ಪದಕಗಳನ್ನು ಉತ್ಪಾದಿಸುತ್ತದೆ. ಅಲ್ಲದೆ, ಕಂಪನಿಯ ವಾರ್ಷಿಕ ವಹಿವಾಟು ಬರೋಬ್ಬರಿ 1.25 ಕೋಟಿ ರೂ.! ವಿಕಾಸ್ ಕುಮಾರ್ ಎಂಬವರೇ ಈ ‘ಮೈನಸ್ ಡಿಗ್ರಿ’ಯ ಮಾಲೀಕ. ಬಿಹಾರದ ನವಾಡ ಜಿಲ್ಲೆಯ ನರಹತ್ ಎಂಬ ಸಣ್ಣಹಳ್ಳಿಯಿಂದ ಬಂದ ವಿಕಾಸ್ ಕುಮಾರ್ ಮತ್ತು ಅವರ ಸಹೋದರ ರಾಹುಲ್ ಕುಮಾರ್ ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ತ್ಯಾಜ್ಯವನ್ನೇ ‘ಚಿನ್ನ’ವಾಗಿ ಪರಿವರ್ತಿಸುತ್ತಿದ್ದಾರೆ.
ವಿದೇಶಗಳಿಗೂ ಉತ್ಪನ್ನಗಳು ರಫ್ತು: ಜನರು ನಿಷ್ಪ್ರಯೋಜಕವೆಂದು ಎಸೆಯುವ ಪ್ಲಾಸ್ಟಿಕ್ ಈಗ ಈ ಇಬ್ಬರು ಸಹೋದರರಿಗೆ ಬಹು-ಮಿಲಿಯನ್ ಡಾಲರ್ ವ್ಯವಹಾರದ ಮೂಲವಾಗಿದೆ. ಟಾಟಾ ಮೋಟಾರ್ಸ್, ಐಡಿಎಫ್‌ಸಿ ಬ್ಯಾಂಕ್, ಬಿಎಂಡಬ್ಲ್ಯು ಮತ್ತು ಅಡಿಡಾಸ್‌ನಂತಹ ಜಾಗತಿಕ ದೈತ್ಯ ಕಂಪನಿಗೂ ಸಹ ಈ ಸಹೋದರರ ಗ್ರಾಹಕರೆಂದರೆ, ಇವರ ಉತ್ಪನ್ನಗಳಿಗೆ ಎಷ್ಟರಮಟ್ಟದಲ್ಲಿ ಬೇಡಿಕೆಯಿದೆ ಎಂಬದನ್ನು ಅಂದಾಜಿಸಬಹುದು. ಅಲ್ಲದೆ, ‘ರೇರ್ ಪ್ಲಾನೆಟ್’ ಮೂಲಕ ಸಿದ್ಧಪಡಿಸುವ ಪದಕಗಳು, ಟ್ರೋಫಿಗಳು, ಪೆನ್ ಸ್ಟ್ಯಾಂಡ್‌ಗಳು ಮತ್ತು ಇತರ ಕಲಾಕೃತಿಗಳು ರಾಷ್ಟ್ರಪತಿ ಭವನವನ್ನೂ ತಲುಪಿವೆ. ಅಲ್ಲದೆ, ಉತ್ಪನ್ನಗಳನ್ನು ಅಮೆರಿಕ, ಜರ್ಮನಿ, ತೈವಾನ್, ಕೆನಡಾ ಮತ್ತು ಸಿಂಗಾಪುರದಂತಹ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ.
ಸಹೋದರರ ಪರಿಚಯ: ಹಿರಿಯ ಸಹೋದರ ವಿಕಾಸ್ ಕುಮಾರ್ ಆರಂಭದಿಂದಲೂ ಶೈಕ್ಷಣಿಕವಾಗಿ ಪ್ರತಿಭಾನ್ವಿತರಾಗಿದ್ದರು. ಐಐಎಂ ಕೋಲ್ಕತ್ತಾದಿಂದ ಬಿ.ಟೆಕ್ ಪೂರ್ಣಗೊಳಿಸಿರುವ ಅವರು, ಬಳಿಕ ಐಐಟಿ ದೆಹಲಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. ಕಿರಿಯ ಸಹೋದರ ರಾಹುಲ್ ಕುಮಾರ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT)ಯಿಂದ ಫ್ಯಾಷನ್ ಟೆಕ್ನಾಲಜಿಯಲ್ಲಿ ಪದವಿ ಗಳಿಸಿದರು. ರಾಹುಲ್ ಸುಮಾರು 12 ಲಕ್ಷ ರೂ. ವಾರ್ಷಿಕ ಪ್ಯಾಕೇಜ್‌ನೊಂದಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸ್ವಂತವಾಗಿ ಏನಾದರೂ ವ್ಯವಹಾರ ಮಾಡಬೇಕೆಂಬ ಹಂಬಲ ಹೊಂದಿದ್ದರು. ಐಐಟಿಯಲ್ಲಿ ಓದುವಾಗ ಅಲ್ಲಿದ್ದ ವಾತಾವರಣವು ವಿಕಾಸ್ ಅವರನ್ನು ಉದ್ಯಮಿಯಾಗಲು ಪ್ರೇರೇಪಿಸಿತು. ಬಳಿಕ ಇಬ್ಬರೂ ಸಹೋದರರು ಒಟ್ಟಾಗಿ ಹೆಚ್ಚಿನ ಸಂಬಳದ ಉದ್ಯೋಗ ಹಾಗೂ ಆರಾಮದಾಯಕ ಜೀವನವನ್ನು ಬಿಟ್ಟು, ಹೋರಾಟದ ಹಾದಿಯನ್ನು ಆಯ್ದುಕೊಂಡರು.
