ಉದಯವಾಹಿನಿ, ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್‌ ವಿರುದ್ಧ 41 ರನ್‌ ಅಂತರದ ಸೋಲು ಕಂಡು ಸರಣಿ ಕೈಚೆಲ್ಲಿತು. ಪಂದ್ಯ ಸೋತರೂ ಕೂಡ ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ನ್ಯೂಜಿಲೆಂಡ್‌ನ ಆಲ್‌ರೌಂಡರ್ ಡ್ಯಾರಿಲ್ ಮಿಚೆಲ್‌ಗೆ ಉಡುಗೊರೆಯಾಗಿ ನೀಡಿದರು.
ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಮಿಚೆಲ್ (352 ರನ್) ಮತ್ತು ಕೊಹ್ಲಿ (240 ರನ್) ಮೂರು ಪಂದ್ಯಗಳ ಸರಣಿಯಲ್ಲಿ ಅಗ್ರ ರನ್ ಗಳಿಸಿದ ಆಟಗಾರರೆನಿಸಿದರು.”ಇಲ್ಲಿ(ಭಾರತದಲ್ಲಿ) ಕೊಡುಗೆ ನೀಡುವುದು ಮತ್ತು ಗೆಲ್ಲುವುದು ನಿಜಕ್ಕೂ ಸಂತೋಷಕರ. ನನಗೆ ಹೆಮ್ಮೆ ಇದೆ. ನಾನು ನನ್ನ ದೇಶಕ್ಕಾಗಿ ಆಡಲು ಇಷ್ಟಪಡುತ್ತೇನೆ. ಇಲ್ಲಿಗೆ ಬರಲು ಸ್ವಲ್ಪ ಸಮಯ ಹಿಡಿಯಿತು. ದೇಶೀಯ ಕ್ರಿಕೆಟ್ ಬಹಳಷ್ಟು ಕಲಿಸಿದೆ” ಎಂದು ಮಿಚೆಲ್ ಪಂದ್ಯದ ನಂತರ ಹೇಳಿದರು. ಏಕದಿನ ಮಾದರಿಯ ಪಂದ್ಯಗಳು ಮುಗಿದ ನಂತರ, ಎರಡೂ ತಂಡಗಳ ಗಮನವು ಈಗ ಐದು ಪಂದ್ಯಗಳ ಟಿ20ಐ ಸರಣಿಯತ್ತ ಸಾಗುತ್ತಿದೆ. ಇದು ಜನವರಿ 21 ರಂದು ನಾಗ್ಪುರದಲ್ಲಿ ಆರಂಭವಾಗಲಿದೆ. ಮಿಚೆಲ್ ಟಿ20ಐಗಳಿಗೆ ತಂಡದಲ್ಲೇ ಇರುತ್ತಾರೆ. ಆದರೆ ಕೊಹ್ಲಿ ಈಗ ಭಾರತ ಪರ ಕೇವಲ 50 ಓವರ್‌ಗಳ ಕ್ರಿಕೆಟ್ ಆಡುತ್ತಿರುವುದರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಭಾರತದಲ್ಲಿ ಮಿಚೆಲ್‌ 8 ಇನಿಂಗ್ಸ್‌ಗಳನ್ನಾಡಿದ್ದು, ಅದರಲ್ಲಿ ನಾಲ್ಕು ಶತಕ ಬಾರಿಸಿದ್ದಾರೆ. ಆ ಮೂಲಕ ಅವರು ಏಕದಿನ ಕ್ರಿಕೆಟ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಪ್ರವಾಸಿ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಐದು ಶತಕಗಳೊಂದಿಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!