ಉದಯವಾಹಿನಿ, 2026ರ ಟಿ20 ವಿಶ್ವಕಪ್‌ನ ಮಹಾ ಹೋರಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ವಿಶ್ವಕಪ್ ಟ್ರೋಫಿಗಾಗಿ ಕಾದಾಡಲಿವೆ. ಆದರೆ, ಈ ಹೈವೋಲ್ವೇಜ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನೀಡಿರುವ ಹೇಳಿಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.
2023ರ ಏಕದಿನ ವಿಶ್ವಕಪ್ ಫೈನಲ್ ನೆನಪಿದೆಯೇ? ಅಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ “ಲಕ್ಷಾಂತರ ಭಾರತೀಯ ಅಭಿಮಾನಿಗಳನ್ನು ಮೌನಗೊಳಿಸುವುದೇ ನನ್ನ ಗುರಿ” ಎಂದಿದ್ದರು. ಹೇಳಿದಂತೆಯೇ ಭಾರತವನ್ನು ಸೋಲಿಸಿ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಮೌನಕ್ಕೆ ತಳ್ಳಿದ್ದರು. ಈಗ ಅದೇ ಮೈದಾನದಲ್ಲಿ ಅದೇ ಫೈನಲ್ ಪಂದ್ಯಕ್ಕೂ ಮುನ್ನ ಮಿಚೆಲ್ ಸ್ಯಾಂಟ್ನರ್ ಕೂಡ ಅಂತಹದ್ದೇ ಧಾಟಿಯಲ್ಲಿ ಮಾತನಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಯಾಂಟ್ನರ್, “ಈ ಫೈನಲ್‌ನಲ್ಲಿ ನಮ್ಮನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಯಾರು ಪರಿಗಣಿಸದಿದ್ದರೂ ಪರವಾಗಿಲ್ಲ. ಸಣ್ಣ ಸಣ್ಣ ತಪ್ಪುಗಳನ್ನು ತಿದ್ದಿಕೊಂಡು ನಾವು ಶ್ರೇಷ್ಠ ಪ್ರದರ್ಶನ ನೀಡಲು ಸಜ್ಜಾಗಿದ್ದೇವೆ. ನಮ್ಮಗೆಲುವಿನಿಂದ ಕೆಲವು ಅಭಿಮಾನಿಗಳ ಹೃದಯ ಒಡೆಯುವುದಾದರೆ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಏಕೆಂದರೆ ನಮಗೆ ಟಿ20 ವಿಶ್ವಕಪ್ ಗೆಲ್ಲುವುದು ಮುಖ್ಯ” ಎಂದು ನೇರವಾಗಿ ಸವಾಲು ಹಾಕಿದ್ದಾರೆ.
ಸ್ಯಾಂಟ್ಸರ್ ಅವರ ಈ ಹೇಳಿಕೆ ಸಹಜವಾಗಿಯೇ ಭಾರತೀಯ ಅಭಿಮಾನಿಗಳಲ್ಲಿ ಹಳೆಯ ಕಹಿ ನೆನಪುಗಳನ್ನು ಕೆರಳಿಸಿದೆ. ಕಮಿನ್ಸ್ ಮಾತು ಸತ್ಯವಾದಂತೆ, ಸ್ಯಾಂಟ್ನರ್ ಮಾತು ಕೂಡ ನಿಜವಾಗುತ್ತದೆಯೇ ಎಂಬ ಆತಂಕ ಮನೆಮಾಡಿದೆ. ಆದರೆ, ಟಿ20 ಮಾದರಿಯಲ್ಲಿ ಭಾರತ ತಂಡ ಸದ್ಯ ಅಪ್ರತಿಮ ಫಾರ್ಮ್‌ನಲ್ಲಿದೆ. ಹೀಗಾಗಿ ಕಿವೀಸ್ ನಾಯಕನ ಸವಾಲನ್ನು ಟೀಮ್ ಇಂಡಿಯಾ ಮೈದಾನದಲ್ಲೇ ಮೆಟ್ಟಿ ನಿಲ್ಲಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ.

Leave a Reply

Your email address will not be published. Required fields are marked *

error: Content is protected !!