
ಉದಯವಾಹಿನಿ, ಜೈಪುರ: ಅಪರಿಚಿತರೊಂದಿಗೆ ಮಾತನಾಡಲ್ಲ ಎಂದಿದ್ದಕ್ಕೆ ಫೋಟೋಗ್ರಾಫರ್ ಬಾಲಕಿ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಓಂಪ್ರಕಾಶ್ ಅಲಿಯಾಸ್ ಜಾನಿ (19) ಕೃತ್ಯ ಎಸಗಿದ ಫೋಟೋಗ್ರಾಫರ್. ಓಂಪ್ರಕಾಶ್ ಮದುವೆಯೊಂದರಲ್ಲಿ ಫೋಟೋಗ್ರಾಫರ್ ಆಗಿ ಹೋಗಿದ್ದ ವೇಳೆ ಬಾಲಕಿಯನ್ನು ನೋಡಿದ್ದಾನೆ. ಬಳಿಕ ಆಕೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಬಾಲಕಿ ತಾನು ಅಪರಿಚಿತರೊಂದಿಗೆ ಮಾತನಾಡುವುದಿಲ್ಲ ಎಂದು ಆತನಿಗೆ ಬೈದಿದ್ದಾಳೆ. ಇದರಿಂದ ಕೋಪಗೊಂಡ ಫೋಟೋಗ್ರಾಫರ್ ಆಕೆಯ ಮೇಲೆ ಆಸಿಡ್ ದಾಳಿ ಮಾಡಲು ಮುಂದಾಗಿದ್ದಾನೆ.
ಈ ಘಟನೆಯ ಬಳಿಕ ಬಾಲಕಿ ಶ್ರೀ ಗಂಗಾನಗರ ಜಿಲ್ಲೆಯ ಸುಭಾಷ್ ಪಾರ್ಕ್ ಪ್ರದೇಶದಲ್ಲಿ ತನ್ನ ಶಾಲೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಓಂಪ್ರಕಾಶ್ ಬೈಕ್‌ನಲ್ಲಿ ತೆರಳಿ ಆಕೆಯ ಮೇಲೆ ಆಸಿಡ್ ಬಾಟಲಿ ಎಸೆದಿದ್ದಾನೆ. ಇದರ ಪರಿಣಾಮ ಬಾಲಕಿಯ ಬಟ್ಟೆ ಮತ್ತು ಬೆರಳಿಗೆ ಸುಟ್ಟ ಗಾಯಗಳಾಗಿದೆ. ಇನ್ನು ಆರೋಪಿ ಓಂಪ್ರಕಾಶ್ ಪೊಲೀಸರ ಕೈಗೆ ಸಿಕ್ಕಿ ಬೀಳಬಾರದೆಂದು ತಾನು ಬಂದಿದ್ದ ಬೈಕಿನ ನಂಬರ್ ಪ್ಲೇಟ್ ಅನ್ನು ಬಟ್ಟೆಯಿಂದ ಮರೆಮಾಚಿದ್ದು, ಮುಖವನ್ನು ಬಟ್ಟೆ ಮತ್ತು ಹೆಲ್ಮೆಟ್‌ನಿಂದ ಮುಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಆಸಿಡ್ ದಾಲಿಯ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಆರೋಪಿ ಮುಖ ಮತ್ತು ವಾಹನದ ನಂಬರ್ ಪ್ಲೇಟ್ ಅನ್ನು ಮುಚ್ಚಿಕೊಂಡಿದ್ದರಿಂದ, ಆ ವ್ಯಕ್ತಿಯನ್ನು ಗುರುತಿಸುವುದು ಪೊಲೀಸರಿಗೆ ಕಷ್ಟದ ಕೆಲಸವಾಗಿತ್ತು. ಆದ್ದರಿಂದ ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದರು. ಘಟನೆ ನಡೆದು ಮೂರು ದಿನಗಳ ಬಳಿಕ ಆರೋಪಿಯ ಜಾಡು ಹಿಡಿದು ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
