ಉದಯವಾಹಿನಿ, ಹೈದರಾಬಾದ್ : ಒಂದು ಕಾಲದಲ್ಲಿ ಭಾರತ, ಬಂದೂಕಿನ ಒಂದು ಗುಂಡಿಗೂ ಇತರ ದೇಶಗಳನ್ನು ಅವಲಂಬಿಸಬೇಕಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಸಣ್ಣ ಶಸ್ತ್ರಾಸ್ತ್ರಗಳಿಂದ ಹಿಡಿದು ಖಂಡಾಂತರ ಕ್ಷಿಪಣಿಗಳನ್ನು ತಾನೇ ತಯಾರಿಸುತ್ತದೆ. ಅಲ್ಲದೆ, 100ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತದೆ. ದೇಶದ ರಕ್ಷಣಾ ಶಕ್ತಿ ಜಾಗತಿಕವಾಗಿ ಗುರುತಿಸುವಂತಾಗಿದೆ.
ವಿಶ್ವ ರಾಷ್ಟ್ರಗಳ ಸೇನೆ ಮತ್ತು ಶಸ್ತ್ರಾಸ್ತ್ರ ಬಲವನ್ನು ವಿಶ್ಲೇಷಿಸುವ ಗ್ಲೋಬಲ್ ಫೈರ್‌ ಪವರ್ (ಜಿಎಫ್‌ಪಿ) ಸೂಚ್ಯಂಕದ ಪ್ರಕಾರ, ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಶಕ್ತಿಶಾಲಿ ರಕ್ಷಣಾ ವ್ಯವಸ್ಥೆ ಹೊಂದಿರುವ ರಾಷ್ಟ್ರ ಎಂದು ತಿಳಿಸಿದೆ. ಅಮೆರಿಕ, ಚೀನಾ, ರಷ್ಯಾ ಟಾಪ್​ 3 ರಾಷ್ಟ್ರಗಳಾಗಿವೆ. ಪಾಕಿಸ್ತಾನದ ವಿರುದ್ಧ ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಡ್ರೋನ್​​ಗಳನ್ನು ಆಗಸದಲ್ಲೇ ಹೊಡೆದು ಹಾಕುವ ಮೂಲಕ ವಿಶ್ವವನ್ನೇ ಬೆರಗುಗೊಳಿಸಿದ್ದಲ್ಲದೇ, ತನ್ನ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ವರದಿ ಹೇಳಿದೆ.
ಅಂತಾರಾಷ್ಟ್ರೀಯ ರಕ್ಷಣಾ ಒಪ್ಪಂದಗಳು ದೇಶದ ಪ್ರಗತಿಯನ್ನು ಮತ್ತಷ್ಟು ವೇಗಗೊಳಿಸಿವೆ. ಮಗ್ಗಲು ಮುಳ್ಳಾಗಿ ಕಾಡುತ್ತಿರುವ ನೆರೆರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶದ ರಕ್ಷಣಾ ಶಕ್ತಿ ಎಷ್ಟಿದೆ. ಭಾರತವು ನಾಲ್ಕನೇ ಅತಿದೊಡ್ಡ ಶಕ್ತಿಯಾಗಿ ಹೇಗೆ ಮಾರ್ಪಟ್ಟಿತು, ಅದು ಯಾವ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ ಮತ್ತು ರಫ್ತು ಮಾಡುತ್ತಿದೆ ಎಂಬುದನ್ನು ಈ ವರದಿಯಲ್ಲಿ ವಿವರವಾಗಿ ನೋಡೋಣ.
ಭಾರತದ ರಕ್ಷಣಾ ಶಕ್ತಿ ಎಷ್ಟು?: GFP ಸೂಚ್ಯಂಕದ ಪ್ರಕಾರ, ಭಾರತವು ವಿಶ್ವದ ಅಗ್ರ 5 ಮಿಲಿಟರಿ ಶಕ್ತಿಗಳಲ್ಲಿ ಒಂದಾಗಿದೆ. 2025ರ ಸಾಲಿನ ಜಿಎಫ್​ಪಿ ವಿಶ್ಲೇಷಣೆಯಲ್ಲಿ ವಿಶ್ವದ 145 ದೇಶಗಳಲ್ಲಿ ಭಾರತ ನಾಲ್ಕನೇ ಶಕ್ತಿಶಾಲಿ ರಾಷ್ಟ್ರವಾಗಿದೆ. ದೇಶದ ಪವರ್ ಇಂಡೆಕ್ಸ್ ಸ್ಕೋರ್ 0.1184 ಆಗಿದೆ. 0.000 ಅಂಕಗಳನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.
ಇದರ ಪ್ರಕಾರ, ಅತ್ಯುತ್ತಮ ಮಿಲಿಟರಿ ಶಕ್ತಿಯನ್ನು ಹೊಂದಿರುವ ಅಗ್ರ ಐದು ದೇಶಗಳಲ್ಲಿ ಕ್ರಮವಾಗಿ ಅಮೆರಿಕ ಮೊದಲಿದ್ದರೆ, ರಷ್ಯಾ, ಚೀನಾ ನಂತರದ ಸ್ಥಾನದಲ್ಲಿವೆ. ಭಾರತದ ನಂತರ ದಕ್ಷಿಣ ಕೊರಿಯಾ ಟಾಪ್​ 5 ನೇ ಸ್ಥಾನದಲ್ಲಿದೆ. ಭಾರತದ ಜೊತೆ ಆಗಾಗ್ಗೆ ತಂಟೆ ಮಾಡುವ ಪಾಕಿಸ್ತಾನ 12ನೇ, ಬಾಂಗ್ಲಾದೇಶ 35ನೇ ಸ್ಥಾನದಲ್ಲಿದೆ. ಈ ರಾಷ್ಟ್ರಗಳ ಸೇನೆ ಮತ್ತು ಶಸ್ತ್ರಾಸ್ತ್ರ ಬಲವನ್ನು ಭಾರತಕ್ಕೆ ಹೋಲಿಸಿದರೆ, ಅತಿ ದುರ್ಬಲ ಎಂಬುದು ಸಾಬೀತಾಗುತ್ತದೆ.
ಪಾಕ್​, ಬಾಂಗ್ಲಾದ ಮಿಲಿಟರಿ ಶಕ್ತಿ ಎಷ್ಟು?: ಭಾರತ 0.1184 ರ ಪವರ್ ಇಂಡೆಕ್ಸ್‌ನೊಂದಿಗೆ ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ 0.2513 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 0.6062 ಅಂಕಗಳೊಂದಿಗೆ 35ನೇ ಸ್ಥಾನದಲ್ಲಿದೆ. ಸೂಚ್ಯಂಕದ ಪ್ರಕಾರ, ಈ ಅಂಕವು ಅತ್ಯಂತ ದುರ್ಬಲ ವರ್ಗಕ್ಕೆ ಸೇರುತ್ತದೆ. ಪವರ್ ಇಂಡೆಕ್ಸ್ ಭಾರತದ ಶಕ್ತಿಯನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತ ಎಲ್ಲ ಮಾದರಿಯಲ್ಲಿ ಅತ್ಯುತ್ತಮ ಎಂದು ಪರಿಗಣಿಸುತ್ತದೆ.

Leave a Reply

Your email address will not be published. Required fields are marked *

error: Content is protected !!