ಉದಯವಾಹಿನಿ , : ಪಾಕಿಸ್ತಾನಿ ಮಾಧ್ಯಮಗಳಲ್ಲಿ ಇತ್ತೀಚೆಗೆ ಎರಡು ಪ್ರಮುಖ ಸುದ್ದಿಗಳು ಭಾರಿ ಚರ್ಚೆಗೆ ಕಾರಣವಾಗಿವೆ. ಒಂದು ಕಡೆ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಸೌದಿ ಅರೇಬಿಯಾದೊಂದಿಗೆ ರಕ್ಷಣಾ ಒಪ್ಪಂದ ವಿಸ್ತರಣೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, ಭಾರತ ಮತ್ತು ಯುಎಇ ನಡುವೆ $3 ಬಿಲಿಯನ್ ಮೌಲ್ಯದ ಎಲ್‌ಎನ್‌ಜಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಬೆಳವಣಿಗೆಗಳು ದಕ್ಷಿಣ ಏಷ್ಯಾ ಮತ್ತು ಕೊಲ್ಲಿ ಪ್ರದೇಶದ ರಾಜಕೀಯ ಸಮೀಕರಣಗಳನ್ನು ಹೊಸ ದಿಕ್ಕಿಗೆ ಕೊಂಡೊಯ್ಯುತ್ತಿವೆ.
ಭಾರತ–ಯುಎಇ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಗಟ್ಟಿಯಾಗುತ್ತಿವೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್-ನಹ್ಯಾನ್ ಅವರು ಕೇವಲ ಎರಡು ಗಂಟೆಗಳ ವಿಶೇಷ ಭೇಟಿಗಾಗಿ ಭಾರತಕ್ಕೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈ ನಿಕಟತೆಯ ಸ್ಪಷ್ಟ ಉದಾಹರಣೆ ಆಗಿದೆ.
ಈ ಭೇಟಿಯ ವೇಳೆ ಭಾರತ, ಯುಎಇಯಿಂದ $3 ಬಿಲಿಯನ್ ಮೌಲ್ಯದ ಎಲ್‌ಎನ್‌ಜಿ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಂತೆ, ಅಬುಧಾಬಿಯ ಸರ್ಕಾರಿ ಕಂಪನಿ ADNOC ಗ್ಯಾಸ್ ಮುಂದಿನ 10 ವರ್ಷಗಳವರೆಗೆ ಪ್ರತಿವರ್ಷ 5 ಲಕ್ಷ ಮೆಟ್ರಿಕ್ ಟನ್ ಎಲ್‌ಎನ್‌ಜಿಯನ್ನು ಹಿಂದೂಸ್ತಾನ್ ಪೆಟ್ರೋಲಿಯಂಗೆ ಪೂರೈಸಲಿದೆ. ಈ ಒಪ್ಪಂದದೊಂದಿಗೆ ಭಾರತ, ಯುಎಇಯ ಅತಿದೊಡ್ಡ ಇಂಧನ ಗ್ರಾಹಕ ರಾಷ್ಟ್ರವಾಗಲಿದೆ. ಇದಕ್ಕೆ ವಿರುದ್ಧವಾಗಿ, ಸೌದಿ ಅರೇಬಿಯಾ ಮತ್ತು ಯುಎಇ ನಡುವಿನ ಸಂಬಂಧಗಳಲ್ಲಿ ಅಂತರ ಹೆಚ್ಚಾಗುತ್ತಿದೆ. ಈ ಬೆಳವಣಿಗೆಗಳು ಪಾಕಿಸ್ತಾನಕ್ಕೆ ಅಸಹಜ ಪರಿಸ್ಥಿತಿ ಉಂಟುಮಾಡಿವೆ. ಅಂತರರಾಷ್ಟ್ರೀಯ ಭದ್ರತಾ ತಜ್ಞ ಮ್ಯಾಕ್ಸ್ ಅಬ್ರಹಾಮ್ಸ್ ಅವರ ಪ್ರಕಾರ, ಪಾಕಿಸ್ತಾನ–ಟರ್ಕಿ–ಸೌದಿ ಮೈತ್ರಿಗೆ ಪ್ರತಿಸ್ಪರ್ಧಿಯಾಗಿ ಭಾರತ–ಇಸ್ರೇಲ್–ಯುಎಇ ಮೈತ್ರಿ ಮತ್ತಷ್ಟು ಬಲಪಡಿಸಿಕೊಳ್ಳುವ ಸಾಧ್ಯತೆ ಇದೆ.
ಯುಎಇ ಜೊತೆ ಭಾರತ ಉದ್ದೇಶ ಪತ್ರಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ, ಭಾರತ ಯಾವುದೇ ಪ್ರಾದೇಶಿಕ ಸಂಘರ್ಷದಲ್ಲಿ ಭಾಗಿಯಾಗುತ್ತದೆ ಎಂಬ ಊಹಾಪೋಹಗಳಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ ನೀಡಿದ್ದಾರೆ. “ರಕ್ಷಣಾ ಸಹಕಾರ ಎಂದರೆ ಯುದ್ಧದಲ್ಲಿ ಭಾಗಿಯಾಗುತ್ತೇವೆ ಎಂಬರ್ಥವಲ್ಲ” ಎಂದು ಅವರು ಹೇಳಿದ್ದಾರೆ.
