ಉದಯವಾಹಿನಿ,ಕೊರ್ಬಾ: ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಆಘಾತಕಾರಿ ಕಳ್ಳತನವೊಂದು ಬೆಳಕಿಗೆ ಬಂದಿದೆ. ಧೋಧಿಪಾರಾದ ರಷ್ಯನ್ ಹಾಸ್ಟೆಲ್ ಬಳಿಯ ಕಾಲುವೆ ಮೇಲೆ ನಿರ್ಮಿಸಲಾದ ಕಬ್ಬಿಣದ ಸೇತುವೆಯನ್ನು ಕಳ್ಳರು ಕದ್ದೊಯ್ದಿದ್ದಾರೆ.
ದಶಕಗಳ ಹಿಂದೆ ಜಲಸಂಪನ್ಮೂಲ ಇಲಾಖೆ (ಡಬ್ಲ್ಯುಆರ್‌ಡಿ) ಕಾಲುವೆ ಮೇಲೆ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದು ಇಲ್ಲಿನ ಸ್ಥಳೀಯರ ದೈನಂದಿನ ಪ್ರಯಾಣಕ್ಕೆ ತೀವ್ರ ಅನುಕೂಲವನ್ನು ಮಾಡಿಕೊಟ್ಟಿತ್ತು. ಜನರಿಗೆ ಅತ್ಯಂತ ಅಗತ್ಯವಾಗಿದ್ದ ಈ ಕಬ್ಬಿಣದ ಸೇತುವೆಯನ್ನು ಕಳ್ಳರು ಮಂಗ ಮಾಯ ಮಾಡಿದ್ದಾರೆ.
ಬಹುಶಃ ಗ್ಯಾಸ್ ಕಟ್ಟರ್ ಬಳಸಿ ಸಂಪೂರ್ಣ ಕಬ್ಬಿಣದ ಸೇತುವೆಯನ್ನು ಕತ್ತರಿಸಿರುವ ಕಳ್ಳರು ಅದನ್ನು ರಾತ್ರೋರಾತ್ರಿ ಸಾಗಿಸಿದ್ದಾರೆ ಎನ್ನಲಾಗಿದೆ. ಪೊಲೀಸರ ಭಯ ಇಲ್ಲದೇ ಇಂತಹ ಕೃತ್ಯ ಎಸಗಿರುವುದರಿಂದ ಸ್ಥಳೀಯರು ಸೇತುವೆ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಸೇತುವೆ ಕದ್ದಿದ್ದಲ್ಲದೇ ನೀರು ಸರಬರಾಜಿಗಾಗಿ ಪುರಸಭೆಯಿಂದ ಸ್ಥಾಪಿಸಲಾದ ಪೈಪ್‌ಲೈನ್‌ನಿಂದ ಕಬ್ಬಿಣದ ಕೋನಗಳನ್ನು ಸಹ ಕಳ್ಳತನ ಮಾಡಿಕೊಂಡು ಹೋಗಲಾಗಿದೆ. ಕಳ್ಳರು 10 ರಿಂದ 15 ಅಡಿ ಉದ್ದದ ಕಬ್ಬಿಣದ ಕೋನಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿದ ಕೌನ್ಸಿಲರ್: ಘಟನೆಯ ನಂತರ ಸ್ಥಳೀಯ ಕೌನ್ಸಿಲರ್ ಲಕ್ಷ್ಮಣ್ ಶ್ರೀವಾಸ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈಗ ಕಾಣೆಯಾದ ಸೇತುವೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೋರ್ಬಾದಲ್ಲಿ ಇಂತಹ ಕಳ್ಳತನವನ್ನು ನೋಡಿದ್ದು ಇದೇ ಮೊದಲು. ಈ ಘಟನೆಯನ್ನು ಪೊಲೀಸರಿಗೆ ವರದಿ ಮಾಡಿದಾಗ ಅವರು ಕೂಡ ಆಘಾತಕ್ಕೊಳಗಾಗಿದ್ದರು ಎಂದು ಅವರು ಹೇಳಿದ್ದಾರೆ.
ಎಸ್ಪಿಗೆ ದೂರು ನೀಡಲು ನಿರ್ಧಾರ: ತ್ವರಿತಗತಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ನಿವಾಸಿಗಳು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ ಎಂದು ಕೌನ್ಸಿಲರ್ ಶ್ರೀವಾಸ್ ಹೇಳಿದ್ದಾರೆ. ಈ ವಿಷಯವು ಕಲೆಕ್ಟರ್ ಅವರಿಗೂ ತಿಳಿದಿದೆ. ಈ ಪ್ರಕರಣದಲ್ಲಿ ಸರಿಯಾದ ಕ್ರಮ ಕೈಗೊಳ್ಳಲಾಗುವುದು, ಅಪರಾಧಿಗಳನ್ನು ಬಂಧಿಸಿ ನ್ಯಾಯ ಕೊಡಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಶ್ರೀವಾಸ್ ಭರವಸೆ ವ್ಯಕ್ತಪಡಿಸಿದ್ದಾರೆ. ಸೇತುವೆಯು ಸುಮಾರು 60 ಅಡಿ ಉದ್ದವಿದ್ದು, 10 ರಿಂದ 15 ಟನ್‌ಗಳಷ್ಟು ತೂಕವಿತ್ತು ಎಂದು ಕೌನ್ಸಿಲರ್ ಮಾಹಿತಿ ನೀಡಿದ್ದಾರೆ. ಅಕ್ರಮ ಮಾರುಕಟ್ಟೆಯಲ್ಲಿಯೂ ಸಹ ಇದರ ಮೌಲ್ಯ ಲಕ್ಷಗಳಲ್ಲಿದೆ ಎಂದು ಅಂದಾಜಿಸಲಾಗಿದೆ.
