ಉದಯವಾಹಿನಿ, ರಾಯ್ಪುರ (ಛತ್ತೀಸ್ಗಢ): ಮಾಜಿ ಸರಪಂಚರೊಬ್ಬರನ್ನು ನಕ್ಸಲರು ಎಕೆ-47 ರೈಫಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಕಾಂಚಲ್ ಗ್ರಾಮದ ನಿವಾಸಿ ಭೀಮಾ ಮಡ್ಕಮ್ ಅವರನ್ನು ಕೌರ್ಗಟ್ಟಾ ಗ್ರಾಮದ ಹೊಲದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ದಾಂತೇವಾಡದ ಬಚೇಲಿಯಿಂದ ಹಿಂತಿರುಗಿದ್ದಾಗ ನಕ್ಸಲರು ಅವರ ಮೇಲೆ ಗುಂಡು ಹಾರಿಸಿದರು. ಈ ಹಿಂದೆಯೂ ನಕ್ಸಲರು ಭೀಮಾ ಮೇಲೆ ದಾಳಿ ನಡೆಸುವ ಪ್ರಯತ್ನ ಮಾಡಿದ್ದರು.
ಕಳೆದ ಮೂರು ದಿನಗಳಲ್ಲಿ ಬಿಜಾಪುರದಲ್ಲಿ ನಡೆದ ಎರಡನೇ ನಕ್ಸಲ್ ಸಂಬಂಧಿತ ನಾಗರಿಕ ಸಾವು ಇದಾಗಿದ್ದು, ಇದು ಇಡೀ ಜಿಲ್ಲೆಯಲ್ಲಿ ಭೀತಿಯನ್ನು ಹುಟ್ಟುಹಾಕಿದೆ.
ಘಟನೆ ಕುರಿತು ಮಾಹಿತಿ ಲಭ್ಯವಾದ ಕೂಡಲೇ, ಪಮೇದ್ ಪೊಲೀಸ್ ತಂಡಗಳು ಪ್ರದೇಶಕ್ಕೆ ಆಗಮಿಸಿ, ತನಿಖೆ ಆರಂಭಿಸಿದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ” ಎಂದು ಬಿಜಾಪುರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಚಂದ್ರಕಾಂತ್ ಗೋವರ್ಣ ಮಾಹಿತಿ ನೀಡಿದರು.
ಪ್ರಾಥಮಿಕ ತನಿಖೆ ಪೂರ್ಣಗೊಂಡ ನಂತರ ಈ ಕುರಿತು ವಿವರವಾದ ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು. ಸುತ್ತಮುತ್ತಲಿನ ಪರಿಸರದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ವರದಿ ಮಾಡುವಂತೆ ನಾವು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದೇವೆ. ಭದ್ರತಾ ಪಡೆಗಳು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿಸಿದರು. ನಕ್ಸಲರಿಂದ ಹತ್ಯೆ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಇವುಗಳನ್ನು ತಡೆಯಲು ದೂರದ ಮತ್ತು ಒಳನಾಡಿನ ಪ್ರದೇಶಗಳಲ್ಲಿ ನಿಯಮಿತವಾಗಿ ಪೊಲೀಸರು ಗಸ್ತು ತಿರುಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಐಇಡಿ ಸ್ಫೋಟದಿಂದ ಯುವಕ ಬಲಿ: ಭಾನುವಾರ ಐಇಡಿ ಮೇಲೆ ಕಾಲಿಟ್ಟ ಪರಿಣಾಮ ಅದು ಸ್ಫೋಟಗೊಂಡು 20 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಬಿಜಾಪುರ ಜಿಲ್ಲೆಯ ಉಸೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರಿಪಾಡ್ ಗ್ರಾಮದಲ್ಲಿ ನಡೆದಿತ್ತು.
ಆಯತ್ ಕುಹರಮಿ ಸಾವನ್ನಪ್ಪಿದ ಯುವಕ. ಈತ ಬುದ್ರ ಕುಹರಮಿ ಎಂಬುವರ ಮಗನಾಗಿದ್ದು, ಕೆಲಸದ ನಿಮಿತ್ತ ಅರಣ್ಯ ಪ್ರದೇಶಕ್ಕೆ ಹೋಗಿದ್ದಾಗ, ನಕ್ಸಲರು ಅಡಗಿಸಿಟ್ಟಿದ್ದ ಐಇಡಿ ಬಾಂಬ್ ಮೇಲೆ ಕಾಲಿರಿಸಿ ಈ ದುರಂತ ಸಂಭವಿಸಿತ್ತು. ಸ್ಫೋಟದಲ್ಲಿ ಯುವಕನ ಕಾಲಿಗೆ ಗಂಭೀರ ಗಾಯವಾಗಿತ್ತು, ಹೀಗಾಗಿ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ ಎಂದು ಬಿಜಾಪುರ ಎಸ್ಪಿ ಜಿತೇಂದ್ರ ಯಾದವ್ ತಿಳಿಸಿದ್ದರು.
