ಉದಯವಾಹಿನಿ, ಕೊಲ್ಲಂ(ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿಗೆ ಕೇರಳದ ಕೊಲ್ಲಂನ ವಿಜಿಲೆನ್ಸ್ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿತು.
ಶ್ರೀಕೋವಿಲ್ ಬಾಗಿಲು ಚೌಕಟ್ಟುಗಳ ಪ್ರಕರಣದಲ್ಲಿ (ಗರ್ಭಗುಡಿಯ ಚಿನ್ನ ಕಳವು) ಅವರಿಗೆ ಜಾಮೀನು ನೀಡಲಾಗಿದೆಯಾದರೂ, ದೇಗುಲದ ದ್ವಾರಪಾಲಕ ಮೂರ್ತಿಯ ಚಿನ್ನ ಕಳವು ಪ್ರಕರಣದಿಂದಾಗಿ ಜೈಲಿನಲ್ಲಿಯೇ ಇರಬೇಕಿದೆ. ಪೊಟ್ಟಿ, ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನದ ಲೇಪನ ಕಾರ್ಯಗಳ ಪ್ರಾಯೋಜಕರಾಗಿದ್ದು ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.
ಪ್ರಕರಣದ ಕುರಿತು ಕಾನೂನಿನಡಿಯಲ್ಲಿ ನಿಗದಿಪಡಿಸಲಾದ ಕಡ್ಡಾಯ 90 ದಿನಗಳ ಅವಧಿ ಮುಗಿದಿದ್ದರೂ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಪಟ್ಟಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಅವರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಎರಡು ಪ್ರಕರಣಗಳಲ್ಲಿ ಪೊಟ್ಟಿ ಮತ್ತು ಇಬ್ಬರು ಮಾಜಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷರು ಸೇರಿದಂತೆ 12 ಜನರನ್ನು ಎಸ್‌ಐಟಿ ಇದುವರೆಗೆ ಬಂಧಿಸಿದೆ. ಶಬರಿಮಲೆ ದೇವಾಲಯದಲ್ಲಿ 2019ರಲ್ಲಿ ನಡೆದ ಪುನರ್ರಚನೆ ಮತ್ತು ಮರುಲೇಪನ ಕಾರ್ಯದ ಸಮಯದಲ್ಲಿ ಶ್ರೀಕೋವಿಲ್ ಬಾಗಿಲು ಚೌಕಟ್ಟುಗಳು ಮತ್ತು ದ್ವಾರಪಾಲಕ ವಿಗ್ರಹಗಳು ಸೇರಿದಂತೆ ದೇಗುಲದಿಂದ 4.54 ಕಿಲೋಗ್ರಾಂಗಳಷ್ಟು ಚಿನ್ನ ಕಳುವಾಗಿತ್ತು.
1998ರಲ್ಲಿ ಉದ್ಯಮಿ ವಿಜಯ್ ಮಲ್ಯ, ದೇವಸ್ಥಾನದಲ್ಲಿ ಚಿನ್ನದ ಲೇಪನ ಮತ್ತು ಹೊದಿಕೆ ಕೆಲಸಕ್ಕಾಗಿ 30.3 ಕಿಲೋಗ್ರಾಂ ಚಿನ್ನ ಮತ್ತು 1,900 ಕಿಲೋಗ್ರಾಂ ತಾಮ್ರ ದೇಣಿಗೆ ನೀಡಿದ್ದರು. ಈ ಚಿನ್ನದ ದೇಣಿಗೆ ಪ್ರಮಾಣ ಮತ್ತು ಲೇಪನದಲ್ಲಿ ಬಳಸಿದ ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಈ ನಡುವೆ ಚಿನ್ನ ಕಳವು ಪ್ರಕರಣದಲ್ಲಿ ಹಣ ವರ್ಗಾವಣೆ ಆಗಿರುವ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಮಂಗಳವಾರ ಕೇರಳ, ತಮಿಳುನಾಡು ಮತ್ತು ಕರ್ನಾಟಕದ 21 ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ನಡೆಸಿದ್ದರು. ದೊಡ್ಡ ಪ್ರಮಾಣದ ಹಣ ವರ್ಗಾವಣೆ ನಡೆದಿದೆಯೇ ಅಥವಾ ಇಲ್ಲವೇ ಎಂಬ ತನಿಖೆಗೆ ಪೊಟ್ಟಿ ಅವರ ಸಹೋದರಿಯ ವೆಂಗನೂರಿನ ವಲಿಯಕಟ್ಟಕ್ಕಲ್‌ನಲ್ಲಿರುವ ನಿವಾಸ ಮತ್ತು ತಿರುವನಂತಪುರಂನಲ್ಲಿರುವ ಕೆ.ಪಿ.ಶಂಕರದಾಸ್, ಎನ್. ವಿಜಯಕುಮಾರ್ ಮತ್ತು ಎಸ್.ಬೈಜು ಅವರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.
