
ಉದಯವಾಹಿನಿ ನಾಗಮಂಗಲ: ಬದಲಾವಣೆ ಜಗದ ನಿಯಮ, ವ್ಯಕ್ತಿ ತನ್ನ ಪ್ರಬುದ್ಧತೆ ಮತ್ತು ಸಂಸ್ಕಾರದಿಂದ ನಿತ್ಯ ಕಲಿಯುತ್ತ ಬದಲಾಗುತ್ತಲೇ ಇರುತ್ತಾನೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ ಎ ಟಿ ಶಿವರಾಮು ಅಭಿಪ್ರಾಯಪಟ್ಟರು.ಅವರು ತಾಲೂಕಿನ ಬಿ ಜಿ ನಗರದ ಬಿಜಿಎಸ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪೋಷಕರ ದಿನ ಮತ್ತು 11 ದಿನಗಳು ನಡೆದ ಸ್ಮರಣಶಕ್ತಿ ಮತ್ತು ಜೀವನ ಕೌಶಲ್ಯಗಳು ಕಾರ್ಯಾಗಾರ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಗುವಿನ ಮೊದಲ ಗುರುವಾದ ತಾಯಿ ಸಾವಿರ ಶಿಕ್ಷಕರಿಗೆ ಸಮನಾಗಿ ಜೀವನ ಮೌಲ್ಯಗಳನ್ನು ಕಲಿಸುತ್ತಾಳೆ, ಮಾತಾ-ಪಿತೃಗಳಿಗೆ ಜನ್ಮ ಜನ್ಮದ ಋಣಿಗಳಾದ ನಾವು ಅನಂತ ವಂದನೆಗಳನ್ನು ಸಲ್ಲಿಸುವಂತಹ ಸಂದರ್ಭ ಒದಗಿಬಂದಿದೆ, ಇದರ ಸದುಪಯೋಗ ಪಡೆದುಕೊಂಡು ಉನ್ನತ ಸಂಸ್ಕೃತಿ ಮತ್ತು ಸಂಸ್ಕಾರ ಭರಿತ ಭಾರತದ ಸತ್ಪ್ರಜೆಗಳಾಗಿ ಎಂದು ಆಶಿಸಿದರು.ಕಾಲೇಜಿನ ಪ್ರಾಂಶುಪಾಲೆ ಟಿ ಎನ್ ಶಿಲ್ಪ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಜೀವನ ಕೌಶಲ್ಯಗಳ ಅನುಷ್ಠಾನಗಳನ್ನು ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಳೆದ 11 ದಿನಗಳಿಂದ ವಿವಿಧ ಚಟುವಟಿಕೆ ಮತ್ತು ಪ್ರಾತ್ಯಕ್ಷಿಕೆ ಗಳೊಂದಿಗೆ ಕಾರ್ಯಾಗಾರ ನಡೆಸಿಕೊಟ್ಟ ಅಂತರ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ, ಆರ್ ಸತೀಶ್ ಗೌರವ ಸ್ವೀಕರಿಸಿ ಸಮಾರೋಪ ನುಡಿಗಳನ್ನಾಡಿದರು.ಇಲ್ಲಿ ತರಬೇತಿ ಪಡೆದ 200 ಕ್ಕೂ ಅಧಿಕ ವಿದ್ಯಾರ್ಥಿಗಳ ತಂದೆ ತಾಯಿಗಳಿಗೆ ಸಾಂಪ್ರದಾಯಿಕ ಪಾದಪೂಜೆ ಮಾಡಿಸಿ, ಆತ್ಮೀಯ ಅಪ್ಪುಗೆಯಲ್ಲಿ ಸಿಹಿ ತಿನ್ನಿಸಿ ಆಶೀರ್ವದಿಸುವ ಸಮಾರಂಭ ಯಶಸ್ವಿಯಾಗಿ ಸಂಪನ್ನಗೊಂಡಿತು. ಹಲವು ಪೋಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಭಾವನಾತ್ಮಕ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚಿಕ್ಕಲಿಂಗಪ್ಪ ಜೆ, ಸುನಿಲ್ ಕುಮಾರ್ ಕೆ ಎಂ, ಎನ್ ಎಸ್ ಚಂದನ್, ಎಂ ಆರ್ ವೇದಮೂರ್ತಿ, ರಂಗನಾಥ್ ಕೆ, ಭವ್ಯಶ್ರೀ ಎಲ್ ಕೆ ಹಾಗೂ ಇತರರು ಹಾಜರಿದ್ದರು.
