ಉದಯವಾಹಿನಿ, ತಿರುವನಂತಪುರಂ: ಕೇರಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸಲಾಗುವುದು. ಇದು ಮೋದಿಯ ಗ್ಯಾರಂಟಿ ಎಂದು ಪ್ರಧಾನಿ ಹೇಳಿದ್ದಾರೆ.
ಚುನಾವಣಾ ದಿನಾಂಕ ಪ್ರಕಟವಾಗುವ ಮೊದಲೇ ಕೇರಳದಲ್ಲಿ ಮೋದಿ ಪಕ್ಷದ ಪರ ಪ್ರಚಾರಕ್ಕೆ ಇಳಿದಿದ್ದು ಇಂದು ತಿರುವನಂತಪುರದಲ್ಲಿ ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್‌ಡಿಎಫ್‌, ಯುಡಿಎಫ್‌ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ತಿರುವನಂತಪುರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಇದು ರಾಜ್ಯದ ಜನರು ಬದಲಾವಣೆ ಬಯಸುತ್ತಿದ್ದಾರೆ ಎನ್ನುವುದಕ್ಕೆ ಸ್ಪಷ್ಟವಾದ ಉದಾಹರಣೆ. ಕೇರಳದಲ್ಲಿ ಬದಲಾವಣೆ ಅನಿವಾರ್ಯ. ಎಡಪಂಥೀಯ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಕೇರಳವನ್ನು ಭ್ರಷ್ಟಾಚಾರ ಮತ್ತು ತುಷ್ಟೀಕರಣದ ರಾಜಕೀಯದ ತಳ್ಳಿವೆ ಎಂದು ದೂರಿದರು. ಎಲ್‌ಡಿಎಫ್‌, ಯುಡಿಎಫ್‌ ಧ್ವಜಗಳು ಮತ್ತು ಚಿಹ್ನೆಗಳು ಭಿನ್ನವಾಗಿದ್ದರೂ ಅವರ ರಾಜಕೀಯ ಮತ್ತು ಕಾರ್ಯಸೂಚಿ ಬಹುತೇಕ ಒಂದೇ ಆಗಿವೆ. ದಶಕಗಳಿಂದ ಎಲ್‌ಡಿಎಫ್ ಮತ್ತು ಯುಡಿಎಫ್ ತಿರುವನಂತಪುರವನ್ನು ನಿರ್ಲಕ್ಷಿಸಿ ನಗರವನ್ನು ಮೂಲಭೂತ ಸೌಕರ್ಯಗಳಿಂದ ವಂಚಿತಗೊಳಿಸಿತ್ತು. ಎಡಪಂಥೀಯರು ಮತ್ತು ಕಾಂಗ್ರೆಸ್ ಜನರ ಅಗತ್ಯಗಳನ್ನು ಪೂರೈಸುವಲ್ಲಿ ನಿರಂತರವಾಗಿ ವಿಫಲವಾಗಿವೆ. ಆದರೆ ನಮ್ಮ ತಂಡ ಅಭಿವೃದ್ಧಿ ಹೊಂದಿದ ತಿರುವನಂತಪುರಂ ಕಡೆಗೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂದರು.

ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಐತಿಹಾಸಿಕ, ಈ ಗೆಲುವು ಉತ್ತಮ ಆಡಳಿತದ ಗೆಲುವು ಮತ್ತು ಅಭಿವೃದ್ಧಿ ಹೊಂದಿದ ಕೇರಳದ ಸಂಕಲ್ಪದ ಗೆಲುವು, ಕೇರಳವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಬದ್ಧತೆಯ ವಿಜಯ ಎಂದು ಬಣ್ಣಿಸಿದರು. ಪ್ರಧಾನಿ ಮೋದಿ ಅವರು ಕೇರಳದಲ್ಲಿ ಬಿಜೆಪಿಯ ಆರಂಭವನ್ನು ಗುಜರಾತ್‌ನಲ್ಲಿ ಪಕ್ಷದ ಆರಂಭಿಕ ಪ್ರಯಾಣದೊಂದಿಗೆ ಹೋಲಿಸಿದರು.

Leave a Reply

Your email address will not be published. Required fields are marked *

error: Content is protected !!