ಉದಯವಾಹಿನಿ, ಅಬುದಾಭಿ (ಯುಎಇ): ಕಳೆದ ನಾಲ್ಜು ವರ್ಷಗಳಿಂದ ಸಾಗಿರುವ ಉಕ್ರೇನ್ ಮತ್ತು ರಷ್ಯಾ ಯುದ್ಧ ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿದ ಪ್ರಸ್ತಾಪದ ಕುರಿತು ರಷ್ಯಾ, ಉಕ್ರೇನ್ ಮತ್ತು ಅಮೆರಿಕದ ಸಮಾಲೋಚಕರು ಅಬುಧಾಬಿಯಲ್ಲಿ ಮೊದಲ ನೇರ ಮಾತುಕತೆ ನಡೆಸಿದರು. ಆರಂಭದಲ್ಲಿ ಈ ಯುದ್ಧ ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 20 ಅಂಶಗಳ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಆದರೆ, ಇವು ರಷ್ಯಾಕ್ಕೆ ಹೆಚ್ಚು ಲಾಭದಾಯಕವಾಗಿವೆ ಎಂದು ಉಕ್ರೇನ್ ಟೀಕಿಸಿತು. ಇದಾದ ಬಳಿಕ ಯುರೋಪಿಯನ್ ಶಾಂತಿಪಾಲಕರು ಮಂಡಿಸಿದ್ದ ಪ್ರಸ್ತಾಪಕ್ಕೆ ಮಾಸ್ಕೋ ಟೀಕಿಸಿತು.
ನಡೆದ ಮಾತುಕತೆ ಇಂದು (ಶನಿವಾರವೂ) ಮುಂದುವರೆಯಲಿದೆ. ಮೊದಲ ದಿನದ ಮಾತುಕತೆಯಲ್ಲಿ ಭೂ ಪ್ರದೇಶಗಳು ಪ್ರಮುಖ ವಿಷವಾಗಿ ಉಳಿದಿವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತಿಳಿಸಿದ್ದಾರೆ. ರಷ್ಯಾ ಆಕ್ರಮಿಸಿರುವ ಪೂರ್ವ ಡಾನ್ಬಾಸ್ ಪ್ರದೇಶದಿಂದ ಹೊರ ಹೋಗುವ ಬೇಡಿಕೆಯನ್ನು ಕೈಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.ಮೊದಲ ದಿನದ ಸಭೆ ಕುರಿತು ಉಕ್ರೇನ್‌ನ ಮುಖ್ಯ ಸಮಾಲೋಚಕ ರುಸ್ಟೆಮ್ ಉಮೆರೊವ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ರಷ್ಯಾದ ಯುದ್ಧವನ್ನು ಕೊನೆಗೊಳಿಸುವ ಅಂಶ ಮತ್ತು ಮಾತುಕತೆ ಪ್ರಕ್ರಿಯೆಯ ಮುಂದಿನ ತರ್ಕದ ಮೇಲೆ ಕೇಂದ್ರೀಕರಿಸಿದೆ ಎಂದಿದ್ದಾರೆ.
ಈ ಸಭೆಯು ಸಂವಾದವನ್ನು ಉತ್ತೇಜಿಸಲು ಮತ್ತು ಬಿಕ್ಕಟ್ಟಿಗೆ ರಾಜಕೀಯ ಪರಿಹಾರಗಳನ್ನು ಗುರುತಿಸುವ ಪ್ರಯತ್ನದ ಭಾಗವಾಗಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯ ಈ ಹಿಂದೆ ತಿಳಿಸಿತ್ತು. ಈ ನಡುವೆ ದಾವೋಸ್‌ನಲ್ಲಿನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಟ್ರಂಪ್ ಝೆಲೆನ್ಸ್ಕಿಯನ್ನು ಭೇಟಿಯಾಗಿದ್ದಾರೆ. ಜೊತೆಗೆ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದರು. ನಾಲ್ಕು ವರ್ಷಗಳ ಕಾಲ ನಡೆದ ಯುದ್ದದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ರಷ್ಯಾ ಉಕ್ರೇನ್‌ನ ಪೂರ್ವದಲ್ಲಿರುವ ಪ್ರದೇಶವನ್ನು ಆಕ್ರಮಿಸಿದ್ದು, ಈ ಪ್ರದೇಶದ ಹಕ್ಕಿನ ಕುರಿತು ಎರಡು ದೇಶಗಳು ಒಮ್ಮತಕ್ಕೆ ಬಂದಿಲ್ಲ.
ಟ್ರಂಪ್ ಆಡಳಿತದ ಯೋಜನೆಯ ಬಗ್ಗೆ ಮಾತನಾಡಲು ಅಬುಧಾಬಿಯಲ್ಲಿ ಇದೇ ಮೊದಲ ಬಾರಿಗೆ ಸಭೆಯಲ್ಲಿ ಎರಡು ದೇಶದ ನಾಯಕರು ಪರಸ್ಪರರು ಎದುರಾಗಿದ್ದಾರೆ. ಈ ಮಾತುಕತೆ ವಿಫಲವಾದರೆ ಪೂರ್ವ ಉಕ್ರೇನ್‌ನ ಸಂಪೂರ್ಣ ನಿಯಂತ್ರಣವನ್ನು ಬಲವಂತವಾಗಿ ಪಡೆಯಲು ಮಾಸ್ಕೋ ಉದ್ದೇಶಿಸಿದೆ ಎಂದು ಪುಟಿನ್ ಈಗಾಗಲೇ ಹಲವು ಬಾರಿ ಹೇಳಿಕೆ ನೀಡಿದ್ದಾರೆ.ಕ್ರೆಮ್ಲಿನ್‌ನಲ್ಲಿ ರಷ್ಯಾ-ಯುಎಸ್ ಮಾತುಕತೆಗಳ ನಂತರ, ಪುಟಿನ್ ಸಹಾಯಕ ಯೂರಿ ಉಷಾಕೋವ್ ಮಾಸ್ಕೋ ಯುದ್ಧವನ್ನು ರಾಜತಾಂತ್ರಿಕವಾಗಿ ಪರಿಹರಿಸುವಲ್ಲಿ ನಿಜವಾಗಿಯೂ ಆಸಕ್ತಿ ಹೊಂದಿದೆ ಎಂದಿದ್ದಾರೆ.
