ಉದಯವಾಹಿನಿ, ದುಬೈ: ಇರಾನ್ ದೇಶಾದ್ಯಂತ ನಡೆದ ಪ್ರತಿಭಟನೆ ಹತ್ತಿಕ್ಕಲು ಅಲ್ಲಿನ ಸರ್ಕಾರ ನಡೆಸಿದ ಕಾರ್ಯಾಚರಣೆಯಲ್ಲಿ ಮೃತರ ಸಂಖ್ಯೆ 5002ಕ್ಕೆ ತಲುಪಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಶುಕ್ರವಾರ ಮಾಹಿತಿ ನೀಡಿದ್ದಾರೆ.ದೇಶದ ಇತಿಹಾಸದಲ್ಲಿ ಅತ್ಯಂತ ವ್ಯಾಪಕವಾದ ಇಂಟರ್ನೆಟ್ ಕಡಿತವು ಎರಡು ವಾರಗಳ ಗಡಿ ದಾಟಿದ್ದು, ಇನ್ನೂ ಅನೇಕರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದನ್ನು ಖಂಡಿಸಿ ಜನರು ಜ.8ರಿಂದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಬಳಿಕ ಸರ್ಕಾರವು ಅಲ್ಲಿ ಇಂಟರ್ನೆಟ್ ಕಡಿತಗೊಳಿಸಿದ್ದರಿಂದ ಮೃತರ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಈ ಮಧ್ಯೆ ಅಮೆರಿಕ ಪಡೆಗಳು ಸ್ಥಳಾಂತರವಾಗುತ್ತಿರುವುದರಿಂದ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ.
4,716 ಪ್ರತಿಭಟನಾಕಾರರು, 203 ಸರ್ಕಾರಕ್ಕೆ ಸಂಬಂಧಿಸಿದವರು, 43 ಮಕ್ಕಳು ಮತ್ತು 40 ನಾಗರಿಕರು ಪ್ರತಿಭಟನೆಯಲ್ಲಿ ಸಾವನ್ನಪ್ಪಿದ್ದಾರೆ. 26,800 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ.
ಇರಾನ್‌ನಲ್ಲಿ ಈ ಹಿಂದೆ ನಡೆದ ಅಶಾಂತಿ ವೇಳೆಯ ಅಂಕಿ ಅಂಶಗಳನ್ನು ಈ ಸುದ್ದಿ ಸಂಸ್ಥೆ ನಿಖರವಾಗಿ ಹೇಳಿತ್ತು. ಜೊತೆಗೆ ಇರಾನ್ ಅಲ್ಲಿರುವ ತಮ್ಮ ಕಾರ್ಯಕರ್ತರ ಜಾಲದಿಂದ ಸಾವಿನ ಸಂಖ್ಯೆಯ ಮಾಹಿತಿಯನ್ನು ಪಡೆದಿದೆ. ಇರಾನ್ ನಲ್ಲಿ ಸದ್ಯ ಅಶಾಂತಿ ಹೆಚ್ಚುತ್ತಿದ್ದು, 1979 ರ ಇಸ್ಲಾಮಿಕ್ ಕ್ರಾಂತಿಯ ಸಮಯದ ಪರಿಸ್ಥಿತಿಯನ್ನ ನೆನಪಿಸುತ್ತದೆ. 3,117 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರ ಬುಧವಾರ ಮೊದಲ ಬಾರಿ ಸಾವಿನ ಸಂಖ್ಯೆ ತಿಳಿಸಿತ್ತು. ಮೃತರಲ್ಲಿ 2,427 ನಾಗರಿಕರು ಮತ್ತು ಭದ್ರತಾ ಪಡೆಗಳಿದ್ದರೆ, ಉಳಿದವರು “ಭಯೋತ್ಪಾದಕರು” ಎಂದು ಹೇಳಿತ್ತು.
ಈ ಮಧ್ಯೆ ಇರಾನ್ ಮೇಲೆ ದಾಳಿಗೆ ದಕ್ಷಿಣ ಚೀನಾ ಸಮುದ್ರದಿಂದ ಪಶ್ಚಿಮ ಏಷ್ಯಾ ಕಡೆಗೆ ಅಮೆರಿಕ ನೌಕಾ ಪಡೆಗಳು ಸ್ಥಳಾಂತರವಾಗಿವೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅಮೆರಿಕ ಮಿಲಿಟರಿ ಬೀಡುಬಿಟ್ಟಿದೆ. ಪ್ರತಿಭಟನೆ ಆರಂಭವಾದ ಬಳಿಕ ಇರಾನ್ಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ನಾವು ಹೊಡೆಯುವ ಮುನ್ನ ಇರಾನ್ ಒಪ್ಪಂದ ಮಾಡಿಕೊಳ್ಳಬೇಕು ಎಂದು ಟ್ರಂಪ್ ಖಡಕ್ ವಾರ್ನಿಂಗ್ ಮಾಡಿದ್ದಾರೆ. “ನಮ್ಮ ಬೃಹತ್ ನೌಕಾಪಡೆಯು ಇರಾನ್ ಕಡೆಗೆ ಸಾಗುತ್ತಿದೆ. ಬಹುಶಃ ನಾವು ಅದನ್ನು ಬಳಸಬೇಕಾಗಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ
