ಉದಯವಾಹಿನಿ, ಇಸ್ಲಾಮಾಬಾದ್‌: ಪಾಕಿಸ್ತಾನದ ವಾಯವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮಹಾ ದುರಂತವೊಂದು ನಡೆದಿದೆ. ಶಾಂತಿ ಸಮಿತಿ ಸದಸ್ಯರೊಬ್ಬರ ನಿವಾಸದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದ ವೇಳೆ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಾಹುತಿ‌ ಬಾಂಬ್‌ ಸ್ಫೋಟದ ತೀವ್ರತೆಗೆ ಮದುವೆ ಮನೆಯ ಛಾವಣಿ ಕುಸಿದುಬಿದ್ದಿದೆ. ಇದರಿಂದ ರಕ್ಷಣಾ ಕಾರ್ಯ ನಡೆಸಲು ಪೊಲೀಸರು ಕೆಲಕಾಲ ಹೆಣಗಾಡುತ್ತಿದ್ದರು. ನಂತರ ಇದೊಂದು ಆತ್ಮಹತ್ಯಾ ದಾಳಿ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಸಜ್ಜಾದ್ ಅಹ್ಮದ್ ಸಾಹಿಬ್ಜಾದಾ ಅವರು ಖಚಿತಪಡಿಸಿದ್ದಾರೆ.

7 ಸಾವು, 25 ಮಂದಿಗೆ ಗಾಯ
ಖೈಬರ್ ಪಖ್ತುಂಖ್ವಾ ರೆಸ್ಕ್ಯೂ 1122 ವಕ್ತಾರ ಬಿಲಾಲ್ ಅಹ್ಮದ್ ಫೈಜಿ ಮಾತನಾಡಿ, ಬಾಂಬ್‌ದಾಳಿ ನಡೆದ ಘಟನಾ ಸ್ಥಳದಿಂದ 7 ಮೃತದೇಹಗಳನ್ನ ಪತ್ತೆ ಮಾಡಲಾಗಿದೆ. 25 ಮಂದಿ ಗಾಯಾಳುಗಳನ್ನ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ, 7 ಅಂಬುಲೆನ್ಸ್‌ಗಳು, ಅಗ್ನಿಶಾಮಕ ವಾಹನ ಮತ್ತು ವಿಪತ್ತು ನಿರ್ವಹಣಾ ವಾಹನಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಸೋಹೈಲ್ ಅಫ್ರಿದಿ, ಆತ್ಮಹತ್ಯಾ ಬಾಂಬ್‌ದಾಳಿ ಬಗ್ಗೆ ಮಾತನಾಡಿದ್ದು, ಘಟನೆಯನ್ನ ಖಂಡಿಸಿದ್ದಾರೆ. ಈ ಕೃತ್ಯಕ್ಕೆ ಕಾರಣರಾದವರ ಪತ್ತೆ ಹಚ್ಚಲು ಆದೇಶಿಸಿದ್ದು, ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಭದ್ರತಾ ಪಡೆಗಳು ತನಿಖೆ ಕೈಗೊಂಡಿವೆ.

Leave a Reply

Your email address will not be published. Required fields are marked *

error: Content is protected !!