ಉದಯವಾಹಿನಿ, ವಾಷಿಂಷ್ಟನ್‌: ಕೌಟುಂಬಿಕ ಕಲಹದಲ್ಲಿ 4 ಜೀವಗಳು ಬಲಿಯಾಗಿರುವ ಘಟನೆ ಅಮೆರಿಕದ ಜಾರ್ಜಿಯಾ ರಾಜ್ಯದ ಲಾರೆನ್ಸ್‌ವಿಲ್ಲೆ ನಗರದಲ್ಲಿ ನಡೆದಿದೆ. ಕುಟುಂಬ ಕಲಹದಿಂದ ಸಿಟ್ಟಿಗೆದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಸಂಬಂಧಿಕರನ್ನ ಗುಂಡಿಕ್ಕಿ ಕೊಂದಿದ್ದಾನೆ. ವಿಜಯ್‌ ಕುಮಾರ್‌ (51) ಗುಂಡು ಹಾರಿಸಿದ ವ್ಯಕ್ತಿ. ಪತ್ನಿ ಅಟ್ಲಾಂಟಾದ ಮೀಮು ಡೋಗ್ರಾ (43), ಸಂಬಂಧಿಕರಾದ ಲಾರೆನ್ಸ್‌ವಿಲ್ಲೆಯ ಗೌರವ್ ಕುಮಾರ್ (33), ನಿಧಿ ಚಂದರ್ (37) ಮತ್ತು ಹರೀಶ್ ಚಂದರ್ (38) ಗುಂಡಿನ ದಾಳಿಗೆ ಬಲಿಯಾದವರು ಎಂದು ಗ್ವಿನೆಟ್ ಕೌಂಟಿ ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ. ಘಟನೆ ಸಮಯದಲ್ಲಿ ತನ್ನ ಮೂವರು ಮಕ್ಕಳು ಬಟ್ಟೆಗಳನ್ನಿಡುವ ದೊಡ್ಡ ಕಬೋರ್ಡ್‌ನಲ್ಲಿ ಬಚ್ಚಿಟ್ಟುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನೂ ದಾಳಿಯೂ ಅತೀವ ದುಃಖ ಉಂಟು ಮಾಡಿದ್ದು, ಮೃತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಕಾರ ನೀಡಲಾಗುತ್ತಿದೆ ಎಂದು ಅಟ್ಲಾಂಟಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಬ್ರೂಕ್ ಐವಿ ಕೋರ್ಟ್‌ನ 1000 ಬ್ಲಾಕ್‌ನಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಶುಕ್ರವಾರ ಬೆಳಗ್ಗಿನ ಜಾವ 2:30 ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಘಟನೆ ವೇಳೆ ಬಟ್ಟೆ ಇಡುವ ಕಬೋರ್ಡ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕುಮಾರ್‌ ಮತ್ತು ಡೊಗ್ರಾ ದಂಪತಿ ಪುತ್ರ, 911 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಮಾಹಿತಿ ಪಡೆದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದಾಗ ಗುಂಡೇಟಿನಿಂದ ಮೃತಪಟ್ಟಿದ್ದ ನಾಲ್ವರ ಶವಗಳು ರಕ್ತಸಿಕ್ತವಾಗಿ ಬಿದ್ದಿದ್ದವು. ಕೃತ್ಯಗೈದು ಎಸ್ಕೇಪ್‌ ಆಗಿದ್ದ ವ್ಯಕ್ತಿಯ ವಾಹನ ಇನ್ನೂ ಡ್ರೈವ್‌ನಲ್ಲಿತ್ತು. ಹಾಗಾಗಿ ಆರೋಪಿ ಬೆನ್ನಟ್ಟಿದ ಪೊಲೀಸರು ಸಮೀಪದಲ್ಲಿದ್ದ ಅರಣ್ಯ ಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು. ಬಳಿಕ ಮೂವರು ಮಕ್ಕಳನ್ನ ಅವರ ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!