ಉದಯವಾಹಿನಿ, ಟೆಹ್ರಾನ್(ಇರಾನ್): ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆ ಬುಧವಾರ 12ನೇ ದಿನಕ್ಕೆ ಕಾಲಿಟ್ಟಿದ್ದು, ಅಂತ್ಯ ಕಾಣುತ್ತಿಲ್ಲ. ಇರಾನಿನ 16 ಹಡಗುಗಳನ್ನು ನಾಶಪಡಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಹಾರ್ಮುಜ್​ ಜಲಸಂಧಿ ಬಳಸದಂತೆ ಟ್ಯಾಂಕರ್‌ಗಳನ್ನು ನಿಲ್ಲಿಸುವ ಇರಾನ್​ ಬೆದರಿಕೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇಸ್ಲಾಮಿಕ್ ಗಣರಾಜ್ಯವು ಈ ಪ್ರದೇಶದ ತೈಲ ರಫ್ತನ್ನು ನಿರ್ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಲ್ಲದೆ, ವಿಶ್ವದ ಶೇಕಡಾ 20ರಷ್ಟು ತೈಲ ಸಾಗಿಸುವ ಹಾರ್ಮುಜ್​ ಜಲಸಂಧಿ ಬಳಸದಂತೆ ಇರಾನ್​ ಬೆದರಿಕೆವೊಡ್ಡಿದ ಹಿನ್ನೆಲೆಯಲ್ಲಿ, ಹಡಗುಗಳನ್ನು ನಾಶಗೊಳಿಸಿರುವುದಾಗಿ ಅಮೆರಿಕ ಸೇನೆ ತಿಳಿಸಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಸ್ಫೋಟಕಗಳನ್ನು ಇಟ್ಟಿರುವ ಬಗ್ಗೆ ಯಾವುದೇ ವರದಿಗಳಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹೇಳಿದ್ದಾರೆ. ಟ್ರಂಪ್ ಈ ಹಿಂದೆ ಇರಾನ್‌ಗೆ ಜಲಸಂಧಿಯಲ್ಲಿ ಗಣಿ ಹಾಕದಂತೆ ಎಚ್ಚರಿಕೆ ನೀಡಿದ ಬಳಿಕ, ಅಮೆರಿಕನ್ ಸೇನೆಯು ದೃಶ್ಯಗಳೊಂದಿಗೆ ಹಡಗುಗಳ ಕುರಿತು ಮಾಹಿತಿ ಹಂಚಿಕೊಂಡಿತ್ತು. ನಿಯೋಜಿತ ಹಡಗುಗಳನ್ನು ತಕ್ಷಣ ತೆಗೆಯದಿದ್ದರೆ ಹಿಂದೆಂದೂ ಕಂಡಿರದ ಮಟ್ಟದಲ್ಲಿ ಇರಾನ್ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು.

ಅಮೆರಿಕ ನೆಲೆಗಳ ಮೇಲೆ ಇರಾನ್​ ದಾಳಿ: ಇರಾನ್‌ನ ಕ್ರಾಂತಿಕಾರಿ ಪಡೆಗಳು ಬುಧವಾರ ಕುವೈತ್‌ನಲ್ಲಿರುವ ಅಮೆರಿಕದ ನೆಲೆಯನ್ನು ಗುರಿಯಾಗಿಸಿಕೊಂಡು ಕನಿಷ್ಠ ಎರಡು ಕ್ಷಿಪಣಿಗಳು ದಾಳಿ ನಡೆಸಿವೆ ಎಂದು ಇರಾನಿನ ಸುದ್ದಿ ಸಂಸ್ಥೆಗಳಾದ ಫಾರ್ಸ್ ಮತ್ತು ಮೆಹರ್ ವರದಿ ಮಾಡಿವೆ. ಐಆರ್‌ಜಿಸಿ ಗ್ರೌಂಡ್ ಫೋರ್ಸ್ ಕ್ಷಿಪಣಿ ಘಟಕದಿಂದ ಅರಿಫ್ಜಾನ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ಎರಡು ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಗಾರ್ಡ್‌ಗಳು ಹೇಳಿರುವುದಾಗಿ ಕುವೈತ್ ನಗರದ ದಕ್ಷಿಣದಲ್ಲಿರುವ ಕ್ಯಾಂಪ್ ಅರಿಫ್ಜಾನ್ ಅನ್ನು ಉಲ್ಲೇಖಿಸಿ ಫಾರ್ಸ್ ಮತ್ತು ಮೆಹರ್ ವರದಿ ಮಾಡಿದೆ.

ಸಂಘರ್ಷದಲ್ಲಿ ಸುಮಾರು 140 ಅಮೆರಿಕನ್ ಸೈನಿಕರು ಗಾಯಗೊಂಡಿದ್ದಾರೆ ಎಂದು ಪೆಂಟಗನ್ ಹೇಳಿದೆ. ಇವರಲ್ಲಿ ಹೆಚ್ಚಿನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 108 ಯೋಧರು ಈಗಾಗಲೇ ಕರ್ತವ್ಯಕ್ಕೆ ಮರಳಿದ್ದಾರೆ. 8 ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇವರೆಲ್ಲರೂ ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ನಡೆದ ಇರಾನ್​ನ ರಾಕೆಟ್ ಮತ್ತು ಡ್ರೋನ್​ ದಾಳಿಯಲ್ಲಿ ಗಾಯಗೊಂಡಿದ್ಧಾರೆ. ಈ ಸಂದರ್ಭದಲ್ಲಿ 7 ಸೈನಿಕರು ಸಾವನ್ನಪ್ಪಿದ್ದರು.ಸಂಘರ್ಷದ ಪರಿಣಾಮಗಳು ಮಧ್ಯಪ್ರಾಚ್ಯ ಮತ್ತು ಅದರಾಚೆಗೂ ಹರಡಿದೆ. ಈ ನಡುವೆ ಮಾತುಕತೆಗಳಿಗೆ ಇರಾನ್​ ನಾಯಕರು ನಿರಾಕರಿಸಿದ್ದು, ಟ್ರಂಪ್‌ಗೆ ಪ್ರತ್ಯುತ್ತರ ನೀಡಿದ್ದಾರೆ. ಇಸ್ರೇಲ್ ಮತ್ತು ಗಲ್ಫ್ ಅರಬ್ ರಾಷ್ಟ್ರಗಳ ವಿರುದ್ಧ ಹೊಸ ದಾಳಿಗಳು ಮುಂದುವರೆದಿವೆ.

 

Leave a Reply

Your email address will not be published. Required fields are marked *

error: Content is protected !!