ಉದಯವಾಹಿನಿ, ಥಾಣೆ(ಮಹಾರಾಷ್ಟ್ರ): ಡಿಜಿಟಲ್ ಅರೆಸ್ಟ್ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಿದ್ದರೂ ಮತ್ತೆ ಮತ್ತೆ ಜನರು ಇಂಥ ವಂಚನೆಯ ಜಾಲದೊಳಗೆ ಬೀಳುತ್ತಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿ 64 ವರ್ಷದ ವ್ಯಕ್ತಿ ಸೈಬರ್ ವಂಚಕರ ಬಲೆಗೆ ಬಿದ್ದು, 1.56 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಹಿರಿಯ ನಾಗರಿಕರನ್ನು ವ್ಯವಸ್ಥಿತವಾಗಿ ‘ಗೃಹ ಬಂಧನ’ಕ್ಕೆ ಒಳಪಡಿಸುವ ವಂಚಕರು ಮುಂಬೈ ಪೊಲೀಸರ ನಕಲಿ ಎಫ್ಐಆರ್, ನಕಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವುಗಳನ್ನು ನಿಜವೆಂಬಂತೆ ಬಿಂಬಿಸಿ ಕೃತ್ಯ ಎಸಗುತ್ತಿದ್ದಾರೆ.
ಥಾಣೆಯ ಬದ್ಲಾಪುರದ ಕಟ್ರಾಪ್‌ನ ವ್ಯಕ್ತಿಯನ್ನು ಫೆ.12ರಿಂದ ಮಾ.7ರ ವರೆಗೆ ಡಿಜಿಟಲ್ ಬಂಧನಕ್ಕೆ ಒಳಪಡಿಸಲಾಗಿದೆ. ಇವರಿಗೆ ಹಲವು ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡಿರುವ ವಂಚಕರು, ನಿಮ್ಮ ಮೇಲೆ 40 ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸಿದ ಆರೋಪವಿದ್ದು, ದೂರು ದಾಖಲಾಗಿದೆ ಎಂದು ಬೆದರಿಸಿದ್ದರು. ಇಷ್ಟಕ್ಕೆ ಸುಮ್ಮನಾಗದೆ ಮತ್ತಷ್ಟು ಭೀತಿ ಸೃಷ್ಟಿಸುವ ಉದ್ದೇಶದಿಂದ, ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳು ಅಕ್ರಮ ಹಣ ವರ್ಗಾವಣೆಯ ಹಿನ್ನೆಲೆಯಲ್ಲಿ ತನಿಖೆಗೆ ಒಳಪಟ್ಟಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತರನ್ನು ನಿರಂತರ ಕಣ್ಗಾವಲಿನಲ್ಲಿಡಲು ಪತ್ನಿಯ ಮೊಬೈಲ್ ಫೋನ್‌ನಲ್ಲಿ ಸಿಗ್ನಲ್ ಮೆಸೇಜಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಂತೆ ಸೂಚಿಸಿದ್ದಾರೆ. ನಕಲಿ ಮುಂಬೈ ಪೊಲೀಸ್ ಎಫ್‌ಐಆರ್‌ಗಳು, ನಕಲಿ ಬ್ಯಾಂಕ್ ಪತ್ರ ಮತ್ತು ಸಂತ್ರಸ್ತ ವ್ಯಕ್ತಿಯ ಹೆಸರಿನಲ್ಲಿ ಎಟಿಎಂ ಕಾರ್ಡ್ ಫೋಟೋಗಳು ಸೇರಿದಂತೆ ಹಲವಾರು ನಕಲಿ ದಾಖಲೆಗಳನ್ನು ಆ್ಯಪ್‌ನಲ್ಲಿ ಕಳುಹಿಸಿ, ಉನ್ನತ ಮಟ್ಟದ ತನಿಖೆಯಲ್ಲಿರುವಂತೆ ನಂಬಿಸಿದ್ದಾರೆ. ಜೊತೆಗೆ, ನಕಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್‌ಗಳನ್ನೂ ಕಳುಹಿಸಿದ್ದಾರೆ.
ಡಿಜಿಟಲ್ ಬಂಧನದಲ್ಲಿ ವ್ಯಕ್ತಿಯನ್ನು ಒಂದು ತಿಂಗಳು ನಿರಂತರ ಆಡಿಯೋ ಮತ್ತು ವಿಡಿಯೋ ಕಣ್ಗಾವಲಿನಲ್ಲಿಡುವ ಮೂಲಕ ಅವರು ಬೇರೆಯವರಿಂದ ಯಾವುದೇ ಸಹಾಯ ಪಡೆಯದಂತೆಯೂ ನೋಡಿಕೊಂಡಿದ್ದಾರೆ. ಆ ಬಳಿಕ ಬ್ಯಾಂಕ್ ಖಾತೆಗಳು ಮತ್ತು ಉಳಿತಾಯ ಖಾತೆಗಳನ್ನು ಪರಿಶೀಲನೆಗಾಗಿ ಆರ್‌ಬಿಐಗೆ ನೀಡುವಂತೆ ಸೂಚಿಸಿದ್ದು, ಹಣಕಾಸಿನ ಮಾಹಿತಿ ಪಡೆದು ಆರ್‌ಟಿಜಿಎಸ್ ಮೂಲಕ ಒಟ್ಟು 1,56,45,000 ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವಂತೆ ಪೀಡಿಸಿದ್ದಾರೆ.
ಈ ಎಲ್ಲಾ ಘಟನೆಗಳು ನಡೆದ ಬೆನ್ನಲ್ಲೇ ತಾವು ವಂಚನೆಗೆ ಒಳಗಾಗಿರುವುದನ್ನು ತಿಳಿದ ಸಂತ್ರಸ್ತ ವ್ಯಕ್ತಿ ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ವಂಚಕರ ಹೆಸರನ್ನು ಪತ್ತೆ ಮಾಡಿದ್ದಾರೆ. ಆದರೆ ಇದುವರೆಗೆ ಯಾವುದೇ ಬಂಧನವಾಗಿಲ್ಲ, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
