ಉದಯವಾಹಿನಿ, ಅಮೆರಿಕ ಟೆಕ್ಸಾಸ್​ನಲ್ಲಿ ನಿರ್ಮಿಸಲು ಮುಂದಾಗಿರುವ ಪ್ರಮುಖ ತೈಲ ಸಂಸ್ಕರಣಾಗಾರ ಯೋಜನೆಯಲ್ಲಿ ಭಾರತದ ಇಂಧನ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೂಡ ಭಾಗವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಣೆ ಮಾಡಿದ್ದಾರೆ. ಅರ್ಧ ಶತಮಾನದ ಬಳಿಕ ಅಮೆರಿಕದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಹೊಸ ಸಂಸ್ಕರಣಾಗಾರ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಟ್ರೂಥ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಟ್ರಂಪ್​, ಅಮೆರಿಕ ನಿಜವಾದ ಇಂಧನ ಪ್ರಾಬಲ್ಯಕ್ಕೆ ಮರಳುತ್ತಿದೆ. ಟೆಕ್ಸಾಸ್​ನ ಬ್ರೌನ್ಸ್​ವಿಲ್ಲೆ ಬಂದರಿನಲ್ಲಿ ಹೊಸ ತೈಲ ಸಂಸ್ಕರಣಾ ಘಟಕ ತೆರೆಯಲಾಗುತ್ತಿದೆ ಎಂದು ಘೋಷಿಸಲು ಹೆಮ್ಮೆಯಾಗುತ್ತಿದೆ. ಹೊಸ ಸಂಸ್ಕರಣಾಗಾರವು ಅಮೆರಿಕದ ಮಾರುಕಟ್ಟೆಗಳಿಗೆ ಇಂಧನ ನೀಡುವುದರ ಜೊತೆಗೆ, ಇಂಧನ ಉತ್ಪಾದನೆಯನ್ನು ಹೆಚ್ಚಿಸಿ, ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ ಎಂದಿದ್ದಾರೆ. 300 ಬಿಲಿಯನ್ ಡಾಲರ್ ಮೌಲ್ಯದ ಐತಿಹಾಸಿಕ ಒಪ್ಪಂದ ಇದಾಗಿದ್ದು, ಅಮೆರಿಕದ ಇತಿಹಾಸದಲ್ಲಿಯೇ ಅತಿ ದೊಡ್ಡದು. ಇದು ಅಮೆರಿಕದ ಕಾರ್ಮಿಕರು, ಇಂಧನ ಮತ್ತು ದಕ್ಷಿಣ ಟೆಕ್ಸಾಸ್‌ನ ಮಹಾನ್ ಜನರಿಗೆ ಸಿಕ್ಕ ಭಾರಿ ಗೆಲುವು. ಇದರಲ್ಲಿ ಭಾರತ ಮತ್ತು ಅದರ ಅತಿದೊಡ್ಡ ಖಾಸಗಿ ಸ್ವಾಮ್ಯದ ಇಂಧನ ಕಂಪನಿಯಾದ ರಿಲಯನ್ಸ್‌ಗೆ ತನ್ನ ಅಗಾಧ ಹೂಡಿಕೆ ನಡೆಸುತ್ತಿರುವುದಕ್ಕೆ ಧನ್ಯವಾದಗಳು. ಅಮೆರಿಕ ಮೊದಲು ಅಜೆಂಡಾ ನೀತಿಯಡಿ ಪರವಾನಗಿಗಳನ್ನು ಸುವ್ಯವಸ್ಥಿತಗೊಳಿಸಲಿದೆ. ತೆರಿಗೆಗಳನ್ನು ಕಡಿಮೆ ಮಾಡಿರುವುದರಿಂದ ನಮ್ಮ ರಾಷ್ಟ್ರಕ್ಕೆ ಶತಕೋಟಿ ಡಾಲರ್‌ಗಳ ಡೀಲ್‌ಗಳು ಮರಳಿ ಬರುತ್ತಿವೆ ಎಂದು ಟ್ರಂಪ್​ ಹೇಳಿದ್ದಾರೆ.

ರಿಲಯನ್ಸ್ ಭಾರತದ ಅತಿದೊಡ್ಡ ಖಾಸಗಿ ಒಡೆತನದ ಸಂಘಟನೆಯಾಗಿದ್ದು, ಅದರ ಜಾಮ್‌ನಗರ ಸಂಸ್ಕರಣಾಗಾರವು ವಿಶ್ವದ ಅತಿದೊಡ್ಡ ಘಟಕವಾಗಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ನಂತರ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಹೆಚ್ಚಿದ ಉದ್ವಿಗ್ನತೆ ಮತ್ತು ಜಾಗತಿಕ ತೈಲ ಮಾರುಕಟ್ಟೆಗಳಲ್ಲಿನ ಏರಿಳಿತದ ಪರಿಣಾಮಗಳ ನಡುವೆ ಟ್ರಂಪ್​ ಅವರಿಂದ ಈ ಘೋಷಣೆ ಹೊರಬಿದ್ದಿದೆ. ಯುಎಇ, ಸೌದಿ ಅರೇಬಿಯಾ, ಕತಾರ್, ಕುವೈತ್, ಬಹ್ರೇನ್ ಮತ್ತು ಜೋರ್ಡಾನ್ ಸೇರಿದಂತೆ ನೆರೆಯ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳು, ರಾಯಭಾರ ಕಚೇರಿಗಳು ಮತ್ತು ಇಂಧನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರವಾಗಿ ಇರಾನ್​ ಕ್ಷಿಪಣಿಗಳು ಮತ್ತು ಡ್ರೋನ್​ ದಾಳಿ ನಡೆಸಿದೆ. ಹಾರ್ಮುಜ್​ ಜಲಸಂಧಿ ಹಿಡಿತದಿಂದಾಗಿ ತೈಲ ಬಿಕ್ಕಟ್ಟು ಎದುರಾಗಿದ್ದು, ಜಾಗತಿಕ ಇಂಧನ ಪೂರೈಕೆಯಲ್ಲಿ ಸಾಕಷ್ಟು ಅಡಚಣೆಗಳು ತಲೆದೋರಿವೆ.

Leave a Reply

Your email address will not be published. Required fields are marked *

error: Content is protected !!