ಉದಯವಾಹಿನಿ, ದುಬೈ:  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ ದುಬೈ ಮಾಧ್ಯಮ ಕಚೇರಿ, ಈ ದಾಳಿಯಲ್ಲಿ ಇಬ್ಬರು ಘಾನಾ ಪ್ರಜೆಗಳು, ಓರ್ವ ಬಾಂಗ್ಲಾದೇಶಿ ಪ್ರಜೆ ಮತ್ತು ಒಬ್ಬ ಭಾರತೀಯ ಪ್ರಜೆ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದು, ವಿಮಾನ ಹಾರಾಟ ಮುಂದುವರೆದಿದೆ ಎಂದು ಸ್ಪಷಷ್ಟಡಿಸಿದೆ.  ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನನಿಬಿಡ ಏರ್​ಪೋರ್ಟ್​ ಆಗಿದೆ. ದೀರ್ಘ ಪ್ರಯಾಣದ ವಿಮಾನಯಾನ ಸಂಸ್ಥೆಗಳಿಗೆ ಈ ನಿಲ್ದಾಣ ಎಮಿರೇಟ್ಸ್​​ನ ಪ್ರಮುಖ ನೆಲೆಯಾಗಿದೆ. ಇರಾನ್​ ಗಲ್ಫ್​ ರಾಷ್ಟ್ರಗಳ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಸಿದೆ.ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಮಾನಗಳ ವೇಳಾಪಟ್ಟಿಗಳನ್ನು ಮತ್ತೆ ಮರು ಹೊಂದಾಣಿಕೆ ಮಾಡಲು ಹರಸಾಹಸ ಪಡುವಂತಾಗಿದೆ. ಇರಾನ್​ ಮೇಲೆ ಅಮೆರಿಕ ಮತ್ತು ಇಸ್ರೇಲ್​ ವೈಮಾನಿಕ ದಾಳಿ ಬಳಿಕ ಉಲ್ಬಣಗೊಂಡ ಯುದ್ದವು ಜಾಗತಿಕ ಇಂಧನದ ಕೊರತೆಯ ಆತಂಕ ಹೆಚ್ಚಿಸಿದೆ. ಈ ನಡುವೆ ಇರಾನ್ ಪರ್ಷಿಯನ್ ಕೊಲ್ಲಿಯಾದ್ಯಂತ ವಾಣಿಜ್ಯ ಹಡಗುಗಳ ಮೇಲೆ ದಾಳಿ ಮುಂದುವರಿಸಿದೆ. ಮಧ್ಯಪ್ರಾಚ್ಯದಲ್ಲಿರುವ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಾಗಿ ಇರಾನ್‌ನ ಜಂಟಿ ಮಿಲಿಟರಿ ಕಮಾಂಡ್ ಘೋಷಿಸಿದೆ. ಇದು ದುಬೈಗೆ ಆಘಾತವನ್ನುಂಟು ಮಾಡಿದೆ. ದಾಳಿ ಮುಂದುವರೆದಿರುವ ಕಾರಣ ಇಲ್ಲಿ ಅನೇಕ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಆತಂಕದಲ್ಲಿವೆ. ಇದರ ಜೊತೆಗೆ ಸೌದಿ ಅರೇಬಿಯಾ ಮತ್ತು ದ್ವೀಪ ಸಾಮ್ರಾಜ್ಯವಾದ ಬಹ್ರೇನ್ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿವೆ.

ಇದಕ್ಕೂ ಮೊದಲು ಓಮನ್ ಕರಾವಳಿ ಹಾರ್ಮುಜ್ ಜಲಸಂಧಿಯಲ್ಲಿ ಒಂದು ಕಂಟೇನರ್ ಹಡಗನ್ನು ಹೊಡೆದುರುಳಿಸಲಾಗಿದೆ ಎಂದು ಬ್ರಿಟಿಷ್ ಮಿಲಿಟರಿ ತಿಳಿಸಿದೆ. ಇರಾನಿನ ಎಂಟು ಡ್ರೋನ್‌ಗಳನ್ನು ಹೊಡೆದುರುಳಿಸಿದಾಗಿ ಕುವೈತ್ ಮಾಹಿತಿ ನೀಡಿದೆ. ಸೌದಿ ಅರೇಬಿಯಾ ರಾಜ್ಯದ ಶೈಬಾ ತೈಲ ನಿಕ್ಷೇಪದ ಕಡೆಗೆ ಹೋಗುತ್ತಿದ್ದ ಐದು ಡ್ರೋನ್‌ಗಳನ್ನು ತಡೆದಿದ್ದೇವೆ ಎಂದು ಅದು ಇದೇ ವೇಳೆ ಮಾಹಿತಿ ಒದಗಿಸಿದೆ.

ಪರ್ಷಿಯನ್ ಕೊಲ್ಲಿಯಿಂದ ಹಿಂದೂ ಮಹಾಸಾಗರದ ಕಡೆಗೆ ಸಾಗಿಸುವ ಸರಕು ಸಾಗಣೆ ಹಡಗುಗಳು ಹಾರ್ಮುಜ್​ ಜಲಸಂಧಿಯಲ್ಲೇ ಬರಬೇಕಿದೆ. ಈ ಜಲಸಂಧಿಯ ಮೇಲೆ ಇರಾನ್​ ಬಿಗಿ ಹಿಡಿತ ಸಾಧಿಸಿದೆ. ಇನ್ನು ಗಲ್ಫ್ ಅರಬ್ ರಾಷ್ಟ್ರಗಳಲ್ಲಿನ ತೈಲ ಮತ್ತು ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡು ಇರಾನ್​ ದಾಳಿ ಮುಂದುವರೆಸಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ತಮ್ಮ ಸಂಘರ್ಷವನ್ನು ಕೊನೆಗೊಳಿಸಲು ಒತ್ತಡ ಹೇರಲು ಮುಂದಾಗಿದೆ. ಇದು ಸಾಕಷ್ಟು ಜಾಗತಿಕ ಆರ್ಥಿಕ ತೊಂದರೆಯನ್ನು ಉಂಟುಮಾಡುವ ಸಾಧ್ಯತೆಗಳು ಈಗಾಗಲೇ ಗೋಚರಿಸಲು ಆರಂಭವಾಗಿದೆ. ಈ ನಡುವೆ ಇರಾನ್ ತನ್ನ ನೆರೆಯ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಗಲ್ಫ್ ಸಹಕಾರ ಮಂಡಳಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತ ಚಲಾಯಿಸಿದೆ.

Leave a Reply

Your email address will not be published. Required fields are marked *

error: Content is protected !!