ಉದಯವಾಹಿನಿ, ನವದೆಹಲಿ: 18ನೇ ರೋಜಗಾರ್ ಮೇಳ ಹಿನ್ನೆಲೆ ಇಂದು ದೇಶಾದ್ಯಂತದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡ ಯುವಕರಿಗೆ 61,000ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿತರಿಸಿದರು. ಈ ಕಾರ್ಯಕ್ರಮವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗಿತ್ತು. ದೇಶದ 45 ವಿವಿಧ ಸ್ಥಳಗಳಲ್ಲಿ ಯುವಕರು ಭಾಗವಹಿಸಿದ್ದರು. ಈ ರೋಜಗಾರ್ ಮೇಳದ ಮೂಲಕ ಆರಂಭದಿಂದ ಇಲ್ಲಿಯವರೆಗೆ ಒಟ್ಟು 11 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದಿನ ಕಾರ್ಯಕ್ರಮದಲ್ಲಿ ವಿತರಿಸಲಾದ ನೇಮಕಾತಿಗಳು ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಮಂತ್ರಾಲಯಗಳು ಮತ್ತು ಇಲಾಖೆಗಳಿಗೆ ಸಂಬಂಧಿಸಿವೆ. ವಿಶೇಷವಾಗಿ ಗೃಹ ಸಚಿವಾಲಯ ಮತ್ತು ಅರೆಸೇನಾ ಪಡೆಗಳಿಗೆ ಸಂಬಂಧಿಸಿದಂತೆ 49,200 ನೇಮಕಾತಿಗಳಿವೆ ಎಂದು ತಿಳಿಸಿದರು. ಮಹಿಳಾ ಕಾನ್‌ಸ್ಟೇಬಲ್ ನೇಮಕಾತಿ ದೊಡ್ಡ ಸಂಖ್ಯೆಯಲ್ಲಿ ನಡೆದಿದ್ದು, ಕಳೆದ 11 ವರ್ಷಗಳಲ್ಲಿ ಸರ್ಕಾರ ಜಾರಿಗೊಳಿಸಿದ ಸಕ್ರಿಯ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಈ ನೇಮಕಾತಿಗಳನ್ನು ರಾಷ್ಟ್ರ ನಿರ್ಮಾಣಕ್ಕೆ ಆಹ್ವಾನ ಎಂದು ವರ್ಣಿಸಿದ ಮೋದಿ, ಉದ್ಯೋಗ ಸೃಷ್ಟಿಗೆ ಸರ್ಕಾರದ ಬದ್ಧತೆಯನ್ನು ಈ ಮೂಲಕ ಕಾರ್ಯರೂಪಕ್ಕೆ ತರುತ್ತಿದ್ದೇವೆ ಎಂದು ತಿಳಿಸಿದರು. ದೇಶದ ಎಲ್ಲಾ ಭಾಗಗಳ ಯುವಕರು ಈ ಅವಕಾಶವನ್ನು ಪಡೆದಿದ್ದು, ವಿಶೇಷವಾಗಿ ಮಹಿಳೆಯರ ಭಾಗವಹಿಸುವಿಕೆಯು ಗಮನಾರ್ಹವಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ, ಭಾರತವು ಆಧುನಿಕ ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡಿದೆ. ಇದು ನಿರ್ಮಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಲಯದಲ್ಲಿಯೂ ಭಾರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.

 

Leave a Reply

Your email address will not be published. Required fields are marked *

error: Content is protected !!