ಉದಯವಾಹಿನಿ, ಧರ್ಮಶಾಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನಾಲಿ, ಶಿಮ್ಲಾ, ಕಾಲ್ಕಾ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿರಂತರ ಹಿಮಪಾತವಾಗುತ್ತಿದೆ. ಒಂದು ಕಡೆ ಪ್ರವಾಸಿಗರು ಸಂಭ್ರಮಿಸುತ್ತಿದ್ದರೆ, ಇನ್ನೂ ಕೆಲವರು ವಾಪಸ್ ಊರುಗಳಿಗೆ ಮರಳಲು ರಸ್ತೆಗಳಿಲ್ಲದೇ ಪರದಾಡುತ್ತಿದ್ದಾರೆ. ಕುಲು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಕೋಥಿ ಮತ್ತು ಮನಾಲಿ ರಸ್ತೆಗಳು ವಾಹನಗಳಿಂದಲೇ ತುಂಬಿ ತುಳುಕುತ್ತಿವೆ. ಹಿಮಪಾತದಿಂದ ಟ್ರಾಫಿಕ್ ಜಾಮ್ ಉಂಟಾಗಿ 8 ಕಿಮೀಗೂ ಅಧಿಕ ಉದ್ದಕ್ಕೂ ವಾಹನಗಳು ರಸ್ತೆಯಲ್ಲೇ ನಿಂತಿವೆ.
685 ರಸ್ತೆಗಳು ಬಂದ್: ಮನಾಲಿಯಲ್ಲಿ ಒಂದು ಕಡೆ ಹಿಮ ಆವರಿಸಿದ್ರೆ, ಮತ್ತೊಂದು ಕಡೆ ಜನದಟ್ಟಣೆ ಹೆಚ್ಚಾಗಿದೆ. ಹೀಗಾಗಿ ರಾಜ್ಯಾದ್ಯಂತ ಸುಮಾರು 685 ರಸ್ತೆಗಳಲ್ಲಿ ಸಂಚಾರವೇ ಬಂದ್ ಆಗಿದೆ. ಈ ಪೈಕಿ 292 ರಸ್ತೆಗಳು ಲಹೌಲ್ ಮತ್ತು ಸ್ಪತಿ ಜಿಲ್ಲೆಗಳದ್ದಾಗಿವೆ. ಇದಲ್ಲದೇ ಚಂಬಾದಲ್ಲಿ 132, ಮಂಡಿಯಲ್ಲಿ 126, ಕುಲುವಿನಲ್ಲಿ 79, ಸಿರ್ಮೌರ್‌ನಲ್ಲಿ 29, ಕಿನ್ನೌರ್‌ನಲ್ಲಿ 20, ಕಾಂಗ್ರಾದಲ್ಲಿ 4, ಉನಾದಲ್ಲಿ 2 ಮತ್ತು ಸೋಲನ್‌ನಲ್ಲಿ 1 ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಶಿಮ್ಲಾದಲ್ಲಿ ನರಕಂದ, ಜುಬ್ಬಲ್, ಕೊಟ್ಖೈ, ಕುಮಾರ್ಸೈನ್, ಖರಪಥರ್, ರೋಹ್ರು ಮತ್ತು ಚೋಪಾಲ್‌ನಂತಹ ಪಟ್ಟಣಗಳು ಭಾರೀ ಹಿಮಪಾತದಿಂದಾಗಿ ಸಂಪರ್ಕ ಕಡಿತಗೊಂಡಿವೆ.
ಟ್ರಾಫಿಕ್ ಜಾಮ್ ಉಂಟಾಗಿದ್ದು, 2 ದಿನ ಕಳೆದರೂ ಮನಾಲಿಯಲ್ಲಿ ಬಿಡುವು ಸಿಗದಂತಾಗಿದೆ. ಹೀಗಾಗಿ ನೂರಾರು ಸಾವಿರಾರು ಪ್ರವಾರಿಗರು ರಸ್ತೆಗಳಲ್ಲೇ ಸಿಲುಕಿಕೊಂಡಿದ್ದಾರೆ. ಈ ನಡುವೆ ಇಂದು ಚಂಡಮಾರುತ ಅಪ್ಪಳಿಸಲಿದ್ದು, ಭಾರೀ ಮಳೆಯಾಗುವ ಆತಂಕವೂ ಎದುರಾಗಿದೆ.
