ಉದಯವಾಹಿನಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ವಾಹನ ಚಾಲಕರು ಹಾಗೂ ಟೋಲ್ ಸಿಬ್ಬಂದಿ ನಡುವೆ ಆಗುತ್ತಿರುವ ಜಗಳಗಳನ್ನ ತಪ್ಪಿಸಿ, ಹೆದ್ದಾರಿ ಪ್ರಯಾಣ ಸುಖಮಯವಾಗಿಸಲು ಕೇಂದ್ರ ಸರ್ಕಾರ ಹೊಸ ಹೊಸ ಕ್ರಮಗಳನ್ನ ಜಾರಿಗೊಳಿಸುತ್ತಲೇ ಇದೆ. ಈಗಾಗಲೇ ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ನಿಷೇಧಿಸಲು ಸಜ್ಜಾಗಿದೆ. ಇಷ್ಟೆಲ್ಲಾ ಬದಲಾವಣೆ ತಂದಿರುವ ಕೇಂದ್ರ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಟೋಲ್ ಶುಲ್ಕ ಬಾಕಿ ಉಳಿಸಿಕೊಂಡಿದ್ದರೆ, ಅಂತಹ ವಾಹನಗಳಿಗೆ ಎನ್‌ಒಸಿ ಆಗಲಿ ಅಥವಾ ಫಿಟ್‌ನೆಸ್ ಪ್ರಮಾಣ ಪತ್ರವಾಗಲಿ ನೀಡುವುದನ್ನ ನಿಷೇಧಿಸಲು ಮುಂದಾಗಿದೆ.
ಹೌದು. ಅಪ್ಪಿತಪ್ಪಿಯೂ ನೀವು ಟೋಲ್ ಶುಲ್ಕ ಬಾಕಿ ಉಳಿಸಿಕೊಂಡಿದ್ದರೆ ಅಥವಾ ಕಡಿತಗೊಂಡಿಲ್ಲದಿದ್ದರೆ, ಮುಂದಿನ ಬಾರಿ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಫಿಟ್‌ನೆಸ್ ಪ್ರಮಾಣಪತ್ರ ಅಥವಾ ಡ್ರೈವಿಂಗ್ ಲೈಸೆನ್ಸ್ ಪಡೆಯುವುದನ್ನ ತಡೆಹಿಡಿಲಾಗುತ್ತದೆ. ಅಂದ್ರೆ ನೀವು ಹೆದ್ದಾರಿಯಲ್ಲಿ ಟೋಲ್ ಬಗ್ಗೆ ಮಾಡುವ ನಿರ್ಲಕ್ಷ್ಯವು ನಿಮ್ಮ ವಾಹನ ದಾಖಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಜೊತೆಗೆ ವಾಹನಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನ ಪಡೆಯಬೇಕೆಂದ್ರೂ ಅದಕ್ಕೆ ತಡೆಯಾಗಲಿದೆ.
