ಉದಯವಾಹಿನಿ, ಉತ್ತರಪ್ರದೇಶ: ಜಿಮ್ ಕೇಂದ್ರಗಳಲ್ಲಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಆರೋಪದಲ್ಲಿ ಆರು ಮಂದಿಯನ್ನು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಶನಿವಾರವಷ್ಟೇ ಮೊರಾದಾಬಾದ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಬುರ್ಖಾ ಧರಿಸಲು, ಇಸ್ಲಾಂಗೆ ಮತಾಂತರವಾಗಲು ಸಹಪಾಠಿಗಳೇ ಒತ್ತಾಯಿಸಿರುವ ಘಟನೆ ಬೆಳಕಿಗೆ ಬಂದ ಬಳಿಕ ಇದೀಗ ಮಿರ್ಜಾಪುರದ ಜಿಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತಾಂತರ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳಾ ಸಹಾಯವಾಣಿಗೆ ಬಂದ ದೂರಿನ ಆಧಾರದಲ್ಲಿ ಈ ದಾಳಿ ನಡೆದಿದೆ. ಪ್ರಮುಖ ಆರೋಪಿಯ ಮೊಬೈಲ್ ನಲ್ಲಿ 50ಕ್ಕೂ ಹೆಚ್ಚು ಮಹಿಳೆಯರ ಛಾಯಾಚಿತ್ರ ಮತ್ತು ವಿಡಿಯೊಗಳಿವೆ ಎನ್ನಲಾಗಿದೆ.
ಮಹಿಳಾ ಸಹಾಯವಾಣಿ 1090 ನಂಬರ್ ಗೆ ಕರೆ ಮಾಡಿದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಉತ್ತರ ಪ್ರದೇಶದ ಮಿರ್ಜಾಪುರದ ಪೊಲೀಸರು ಜಿಮ್ ಕೇಂದ್ರಗಳ ಮೇಲೆ ದಾಳಿ ನಡೆಸಿ ಧಾರ್ಮಿಕ ಮತಾಂತರ ಮತ್ತು ಸುಲಿಗೆ ಜಾಲವನ್ನು ಭೇದಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸೋಮೆನ್ ವರ್ಮಾ, ಪ್ರಮುಖ ಆರೋಪಿಯ ಮೊಬೈಲ್ ನಲ್ಲಿ ಪಾಸ್ವರ್ಡ್ ಹೊಂದಿದ್ದ ಫೋಲ್ಡರ್ ನಲ್ಲಿ 50ಕ್ಕೂ ಹೆಚ್ಚು ಮಹಿಳೆಯರ ಛಾಯಾಚಿತ್ರಗಳು ಮತ್ತು ವಿಡಿಯೊಗಳು ಕಂಡು ಬಂದಿವೆ. ಎಲ್ಲ ಡಿಜಿಟಲ್ ಪುರಾವೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.ಆರೋಪಿಯ ಫೋನ್ ನಲ್ಲಿ ವಿಹಾರ ಮತ್ತು ವಿವಾಹ ಸಮಾರಂಭಗಳ ತೆಗೆದಿರುವ ಮಹಿಳೆಯರ ಚಿತ್ರಗಳಿವೆ. ಆತ ಹಲವಾರು ಮಹಿಳೆಯರು, ಆರೋಪಿಗಳೊಂದಿಗೆ ಸಂಪರ್ಕ ಹೊಂದಿರುವುದು ಇದರಿಂದ ಬೆಳಕಿಗೆ ಬಂದಿದೆ. ಇದೊಂದು ಜಾಲದಂತೆ ಕಾರ್ಯನಿರ್ವಹಿಸುತ್ತಿದ್ದುದಾಗಿ ಅವರು ಹೇಳಿದರು. ಪ್ರಮುಖ ಆರೋಪಿಯನ್ನು ಮೊಹಮ್ಮದ್ ಶೇಖ್ ಅಲಿ ಎಂದು ಗುರುತಿಸಲಾಗಿದ್ದು, ವಿಚಾರಣೆ ವೇಳೆ ಆತ ಆರಂಭದಲ್ಲಿ ತನ್ನ ಮೇಲಿನ ಎಲ್ಲ ಆರೋಪವನ್ನು ನಿರಾಕರಿಸಿದ್ದಾನೆ. ಆತನ ಸಂಪರ್ಕ ಜಾಲವನ್ನು ಆಧರಿಸಿ ಪೊಲೀಸರು ಮಿರ್ಜಾಪುರದಾದ್ಯಂತ ದಾಳಿ ನಡೆಸಿದ್ದು, ಈ ವೇಳೆ ಸರ್ಕಾರಿ ರೈಲ್ವೆ ಪೊಲೀಸ್ ಕಾನ್‌ಸ್ಟೆಬಲ್ ಶಾದಾಬ್ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಇಮ್ರಾನ್ ಮತ್ತು ಲಕ್ಕಿ ಎಂಬವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆಹಚ್ಚಲು ಲುಕೌಟ್ ನೊಟಿಸ್‌ಗಳನ್ನು ಹೊರಡಿಸಲಾಗಿದ್ದು, ಮಾಹಿತಿ ನೀಡುವವರಿಗೆ ಬಹುಮಾನಗಳನ್ನು ಘೋಷಿಸಲಾಗಿದೆ.
