ಉದಯವಾಹಿನಿ, ಬಿಯಾವರ್: ಊರಿನ ನೆಚ್ಚಿನ ಶ್ವಾನದ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಗ್ರಾಮಸ್ಥರು ಪ್ರಾಣಿ ಪ್ರೀತಿ ಮೆರೆದ ಘಟನೆ ರಾಜಸ್ಥಾನದ ಬಿಯಾವರ್ ಎಂಬಲ್ಲಿ ನಡೆಯಿತು.
“ಡಾಗ್ ಸಾ” ಎಂಬ ಹೆಸರಿನ ಶ್ವಾನ ರಾಜಿಯಾವಾಸ್ ಗ್ರಾಮ ಪಂಚಾಯತ್ ಪ್ರಧಾನ ಕಚೇರಿಯಲ್ಲಿ ಜನವರಿ 3ರ ಬೆಳಗ್ಗೆ ಶೀತದಿಂದ ಸಾವನ್ನಪ್ಪಿತ್ತು. ಸುದ್ದಿ ತಿಳಿದ ಗ್ರಾಮಸ್ಥರು ತಮ್ಮ ಕುಟುಂಬ ಸದಸ್ಯನೇ ಮೃತಪಟ್ಟನೆಂಬಂತೆ ಕಂಬನಿ ಮಿಡಿದರು. ಆಶಾಪುರ ಮಾತಾ ಮಂದಿರ ಚೌಕ್‌ನಲ್ಲಿ ಸೇರಿ, ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲು ನಿರ್ಧರಿಸಿದರು. ದೇಣಿಗೆ ಸಂಗ್ರಹಿಸಿ, ಸಾಮಗ್ರಿ ಖರೀದಿಸಿ ತಂದರು. ಪಿಕಪ್ ವಾಹನವನ್ನು ಅಲಂಕರಿಸಿ, ಶ್ವಾನದ ಕಳೇಬರ ಇಟ್ಟು ಅಂತಿಮ ಯಾತ್ರೆ ನಡೆಸಿದರು. ಸ್ತುತಿಗೀತೆಗಳು, ಕೀರ್ತನೆಗಳು ಮತ್ತು ರಾಮಧುನ್‌ಗಳನ್ನು ಹಾಡಲಾಯಿತು. ನೂರಾರು ಗ್ರಾಮಸ್ಥರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು. ನಂತರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ರಾಜಿಯವಾಸ್ ಗ್ರಾಮ ಪಂಚಾಯತ್‌ನ ಸರ್ಪಂಚ್ ಬ್ರಿಜ್‌ಪಾಲ್ ಸಿಂಗ್ ರಾವತ್ ಮಾತನಾಡಿ, “ಡಾಗ್ ಸಾ ಗ್ರಾಮಸ್ಥರೊಂದಿಗೆ ಅವಿನಾಭಾವ ಸಂಬಂಧ ಹೊಂದಿತ್ತು. ಗ್ರಾಮದಲ್ಲಿ ಯಾರಾದರೂ ಸತ್ತಾಗ, ಅದು ಯಾವುದೇ ಸಮುದಾಯದವರಾಗಿರಲೀ ಅವರ ಮನೆಯ ಹೊರಗೆ ಕುಳಿತುಕೊಳ್ಳುತ್ತಿತ್ತು. ಅಂತ್ಯಕ್ರಿಯೆಯ ಮೆರವಣಿಗೆಯೊಂದಿಗೆ ಸ್ಮಶಾನಕ್ಕೂ ಹೋಗುತ್ತಿತ್ತು. ಅಂತ್ಯಕ್ರಿಯೆಯ ನಂತರವೂ 12 ದಿನಗಳ ಕಾಲ ಮೃತರ ಮನೆಯ ಹೊರಗೆ ಕುಳಿತುಕೊಳ್ಳುತ್ತಿತ್ತು. ಅದಕ್ಕಾಗಿಯೇ ಗ್ರಾಮಸ್ಥರು ಡಾಗ್ ಸಾನನ್ನು ಕೇವಲ ಪ್ರಾಣಿಯಲ್ಲ, ಕುಟುಂಬ ಸದಸ್ಯ ಎಂದು ಪರಿಗಣಿಸಿದ್ದರು” ಎಂದರು.
