ಉದಯವಾಹಿನಿ, ಪಾಟ್ನಾ(ಬಿಹಾರ): ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ದ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕಿರಿಯ ಮಗ ತೇಜಸ್ವಿ ಯಾದವ್ ಅವರನ್ನು ಪಾಟ್ನಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಹೀನಾಯ ಸೋಲುಂಡಿತ್ತು. ಇದಾದ ನಂತರ ಪಕ್ಷದೊಳಗೆ ಮಹತ್ವದ ಬೆಳವಣಿಗೆ ನಡೆದಿದೆ.ಈ ನಿರ್ಧಾರ ಪಕ್ಷವನ್ನು ತಳಮಟ್ಟದಲ್ಲಿ ಮತ್ತಷ್ಟು ಬಲಪಡಿಸುತ್ತದೆ. ಕಾರ್ಯಕಾರಿ ಅಧ್ಯಕ್ಷರಾಗಿ ತೇಜಸ್ವಿ ಯಾದವ್ ಅವರು ಪಕ್ಷ ಸಂಘಟನೆ, ಕಾರ್ಯತಂತ್ರ ಮತ್ತು ಚುನಾವಣಾ ಸಿದ್ಧತೆಗಳ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ, ಪಕ್ಷದಲ್ಲಿ ಉತ್ತರಾಧಿಕಾರದ ರೇಖೆಯನ್ನು ಸ್ಪಷ್ಟಪಡಿಸುವ ನಿರ್ಧಾರವನ್ನು ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಆರ್‌ಜೆಡಿ ತಿಳಿಸಿದೆ. ತೇಜಸ್ವಿ ಯಾದವ್ ಅವರ ಹಿರಿಯ ಸಹೋದರಿ ಮತ್ತು ಪಾಟಲಿಪುತ್ರ ಸಂಸದೆ ಮಿಸಾ ಭಾರ್ತಿ ಕೂಡ ಕಾರ್ಯಕಾರಿ ಸಭೆಯಲ್ಲಿ ಉಪಸ್ಥಿತರಿದ್ದರು. ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ, ಪ್ರಸ್ತುತ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ನಿನ್ನೆ (ಶನಿವಾರ) ಆರ್‌ಜೆಡಿ ವಕ್ತಾರ ಚಿತ್ತರಂಜನ್ ಗಗನ್ ಅವರು ಮಾತನಾಡಿ, ಕಾರ್ಯಕಾರಿ ಸಭೆಯಲ್ಲಿ ಈ ಪ್ರಸ್ತಾವನೆ ಬಂದರೆ ತೇಜಸ್ವಿ ಯಾದವ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಬಹುದು ಎಂದಿದ್ದರು.ವಿಧಾನಸಭಾ ಚುನಾವಣೆಗೆ ಮುನ್ನ ಲಾಲು ಯಾದವ್ ಅವರು ತೇಜಸ್ವಿ ಯಾದವ್ ಅವರಿಗೆ ಎಲ್ಲ ಅಧಿಕಾರಗಳನ್ನು ವಹಿಸಿದ್ದರು.ಮುರಿದು ಬಿದ್ದ ಕಾಂಗ್ರೆಸ್-ಆರ್‌ಜೆಡಿ ಮೈತ್ರಿ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟ ಕೇವಲ 35 ಸ್ಥಾನಗಳನ್ನಷ್ಟೇ ಗೆದ್ದು ಬಾರೀ ಮುಖಭಂಗ ಅನುಭವಿಸಿತ್ತು. ರಾಜ್ಯದ ಬಹುಪಾಲು ಕಾಂಗ್ರೆಸ್ ನಾಯಕರು ಚುನಾವಣೆಯ ಸೋಲಿಗೆ ಆರ್‌ಜೆಡಿಯತ್ತ ಬೊಟ್ಟು ಮಾಡಿದ್ದರು. ಈ ಬೆಳವಣಿಗೆಗಳ ಬಳಿಕ ಇತ್ತೀಚಿಗೆ ಮೈತ್ರಿ ಅಧಿಕೃತವಾಗಿ ಮುರಿದು ಬಿದ್ದಿತ್ತು.

 

Leave a Reply

Your email address will not be published. Required fields are marked *

error: Content is protected !!